
ಉಡುಪಿ : ಚಾಂದ್ರ ಶ್ರೀಕೃಷ್ಣಾಷ್ಟಮಿಯ ಅಂಗವಾಗಿ ಇಂದು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಸಾಮೂಹಿಕವಾಗಿ ಶ್ರೀ ಕೃಷ್ಣ ಮಂತ್ರ ಜಪ ಪಠನ ಹಾಗೂ ಭೋಜನ ಪ್ರಸಾದ ವಿತರಣೆಯು ಸರಳವಾಗಿ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಮತ್ತು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಶ್ರೀ ಸ್ವಾಮಿ ಗೋವಿಂದದೇವ್ ಗಿರಿ ಮಹಾರಾಜ್ ಅವರ ಉಪಸ್ಥಿತಿಯಲ್ಲಿ ಆ.15ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆ 11.15ರಿಂದ ಮಧ್ಯಾಹ್ನ 12.15ರವರೆಗೆ ಸಾಮೂಹಿಕ 1008 ಬಾರಿ ಶ್ರೀ ಕೃಷ್ಣ ಮಂತ್ರ ಜಪ ಪಠನ ಹಾಗೂ ಭೋಜನ ಪ್ರಸಾದ ವಿತರಣೆ ನಡೆಯಲಿದೆ.
ಇದೇ ವೇಳೆ, ಪರಂಪರೆಯಂತೆ ಸೌರಮಾನ ಪದ್ಧತಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವ (ವಿಟ್ಲಪಿಂಡಿ ಉತ್ಸವ)ವು ಸೆಪ್ಟೆಂಬರ್ 14 ಮತ್ತು 15 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಹುಲಿವೇಷ ಮತ್ತು ಮೊಸರು ಕುಡಿಕೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಗುವುದು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.