
ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಸರ್ಕಾರಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗಿದೆ. ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿದ್ದು, ಸದ್ಯಕ್ಕೆ ಅವರಿಗೆ ಯಾವುದೇ ರಿಲೀಫ್ ಸಿಗದಂತಾಗಿದೆ.
ಶಿಡ್ಲಘಟ್ಟ ನಗರಸಭೆಯ ಆಯುಕ್ತರಾದ ಅಮೃತಾ ಗೌಡ ಅವರಿಗೆ ಕರ್ತವ್ಯದ ವೇಳೆ ಅಡ್ಡಿಪಡಿಸಿ, ಧಮ್ಕಿ ಹಾಕಿದ ಗಂಭೀರ ಆರೋಪ ರಾಜೀವ್ ಗೌಡ ಅವರ ಮೇಲಿದೆ. ಈ ಕುರಿತು ದಾಖಲಾದ ದೂರಿನ ಅನ್ವಯ ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ, ರಾಜೀವ್ ಗೌಡ ಅವರು ಶನಿವಾರ (ಜ. 17) ಚಿಂತಾಮಣಿಯ JMFC ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ವಕೀಲರ ಮೂಲಕ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ಆದರೆ, ಪ್ರಕರಣದ ಗಂಭೀರತೆಯನ್ನು ಗಮನಿಸಿದ ನ್ಯಾಯಾಧೀಶರು, ಅರ್ಜಿಯ ಸುದೀರ್ಘ ವಿಚಾರಣೆಯನ್ನು ಜನವರಿ 22ಕ್ಕೆ ನಿಗದಿಪಡಿಸಿದ್ದಾರೆ.
ಕೇವಲ ಆಯುಕ್ತರಿಗೆ ಬೆದರಿಕೆ ಹಾಕಿದ್ದು ಮಾತ್ರವಲ್ಲದೆ, ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಅವರ ವಿರುದ್ಧವೂ ಕೆಟ್ಟ ಪದಬಳಕೆ ಮಾಡಿದ ಆರೋಪ ಇವರ ಮೇಲಿದೆ. ಈ ಸಂಬಂಧ ಜೆಡಿಎಸ್ ತಾಲೂಕು ಉಪಾಧ್ಯಕ್ಷ ಎನ್.ಸಿ. ಶ್ರೀನಿವಾಸ ಗೌಡ ಅವರು ಪ್ರತ್ಯೇಕ ದೂರು ನೀಡಿದ್ದಾರೆ. ಇದರ ಫಲವಾಗಿ ರಾಜೀವ್ ಗೌಡ ವಿರುದ್ಧ BNS 2023ರ ವಿವಿಧ ಕಠಿಣ ಕಲಂ 132, 351(3), 224, 56, 352 ಹಾಗೂ 353(2) ಅಡಿಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿರುವುದರಿಂದ, ಮುಂದಿನ 5 ದಿನಗಳ ಕಾಲ ಕಾಂಗ್ರೆಸ್ ಮುಖಂಡನಿಗೆ ಬಂಧನದ ತೂಗುಗತ್ತಿ ಮುಂದುವರಿದಿದೆ.



































