
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ “ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ” ಎಂಬ ಹೇಳಿಕೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, “ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ನಡೆದಿರುವ ಈ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಿತ್ತು. ಸಿದ್ದರಾಮಯ್ಯನವರ ಬಾಲಿಶ ಹೇಳಿಕೆ ಖಂಡನೀಯ. ದೇಶದ ಜನರ ಕ್ಷಮೆ ಕೇಳಿ, ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು,” ಎಂದು ಹೇಳಿದ್ದಾರೆ.
ವಿಜಯೇಂದ್ರ ಕೂಡ ಸಿದ್ದರಾಮಯ್ಯನವರನ್ನು ಆಕ್ರೋಶಭರಿತವಾಗಿ ಟೀಕಿಸಿ, “ಅಲ್ಪಸಂಖ್ಯಾತರ ಓಲೈಕೆಗಾಗಿ ಸಿದ್ದರಾಮಯ್ಯ ಈ ಮಟ್ಟಕ್ಕೂ ಇಳಿದಿದ್ದಾರೆ. ಪಾಕಿಸ್ತಾನದ ಪರವಾಗಿ ಮಾತನಾಡುತ್ತಿರುವ ರೀತಿಯಿಂದ ಪಾಕಿಸ್ತಾನದಲ್ಲಿ ಇವರ ಹೆಸರಿನಲ್ಲಿ ಮಸೀದಿ ಕಟ್ಟಿದರೆ ಆಶ್ಚರ್ಯವಿಲ್ಲ,” ಎಂದು ಹರಿಹಾಯ್ದಿದ್ದಾರೆ.
ಅವರು ಮುಂದುವರೆದು, “ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯನ್ನು ಜಗತ್ತೇ ಖಂಡಿಸುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಪರವಾಗಿ ನಿಲ್ಲುವುದು ರಾಷ್ಟ್ರದ್ರೋಹಕ್ಕೆ ಸಮಾನ. ಸಿದ್ದರಾಮಯ್ಯ ತಕ್ಷಣ ಕ್ಷಮೆ ಕೇಳಬೇಕು,” ಎಂದು ಆಗ್ರಹಿಸಿದರು.