
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವು ತಾಯಿ ಚಾಮುಂಡೇಶ್ವರಿಯ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ, ಅವರ ರಾಜಕೀಯ ಜೀವನಕ್ಕೆ ಶೀಘ್ರದಲ್ಲಿಯೇ ತೆರೆ ಬೀಳಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ.
ಮೈಸೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, “ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರವು ಎಲ್ಲ ಎಲ್ಲೆ ಮೀರಿ ಮುಂದುವರಿದಿದೆ. ರಾಜ್ಯದ ಸ್ಥಿತಿ ನೇಪಾಳದಂತೆ ಆಗುವ ಸಾಧ್ಯತೆ ಇದೆ. ಜನಸಾಮಾನ್ಯರು ಈಗ ತಮ್ಮ ತಾಳ್ಮೆ ಕಳೆದುಕೊಂಡಿದ್ದು, ಶೀಘ್ರದಲ್ಲೇ ಒಂದು ದೊಡ್ಡ ಜನಕ್ರಾಂತಿ ನಡೆಯಲಿದೆ,” ಎಂದು ಎಚ್ಚರಿಸಿದರು. “ಸದ್ಯದ ಧೋರಣೆಯೇ ಮುಂದುವರಿದರೆ, ಈ ಸರ್ಕಾರ ಬಹುದಿನ ಉಳಿಯುವುದಿಲ್ಲ,” ಎಂದು ಅವರು ಹೇಳಿದರು.
ಬಾನು ಮುಷ್ತಾಕ್ ದಸರಾ ಉದ್ಘಾಟನೆ: ಯತ್ನಾಳ್ ಆಕ್ಷೇಪ
ಮೂಲಗಳ ಪ್ರಕಾರ, ಈ ವರ್ಷದ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯತ್ನಾಳ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇಸ್ಲಾಂ ಧರ್ಮವು ವಿಗ್ರಹಾರಾಧನೆಯನ್ನು ವಿರೋಧಿಸುತ್ತದೆ. ಮೂರ್ತಿ ಪೂಜೆ ಮಾಡುವವರನ್ನು ‘ಕಾಫಿರರು’ ಎಂದು ಇಸ್ಲಾಂ ಪರಿಗಣಿಸುತ್ತದೆ. ಹೀಗಿರುವಾಗ, ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವುದು ಹೇಗೆ ಸಾಧ್ಯ? ಈ ಬಗ್ಗೆ ಇಸ್ಲಾಂ ಧರ್ಮದ ಮೌಲ್ವಿಗಳು ಪ್ರತಿಕ್ರಿಯೆ ನೀಡಬೇಕು,” ಎಂದು ಯತ್ನಾಳ್ ಆಗ್ರಹಿಸಿದರು.
ಬಾನು ಮುಷ್ತಾಕ್ ಅವರ ಬಗ್ಗೆ ಕೆಲವು ಸ್ಪಷ್ಟೀಕರಣ ನೀಡಿದ ಯತ್ನಾಳ್, “ಮೂರ್ತಿ ಪೂಜೆಯಲ್ಲಿ ಪಾಲ್ಗೊಳ್ಳುವ ಬಾನು ಮುಷ್ತಾಕ್ ವಿರುದ್ಧ ಇಸ್ಲಾಂ ಧರ್ಮದ ಮೌಲ್ವಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ? ಮೌಲ್ವಿಗಳು ಇದಕ್ಕೆ ಸ್ಪಷ್ಟ ಉತ್ತರ ನೀಡಬೇಕು. ಇಲ್ಲವಾದರೆ, ಬಾನು ಮುಷ್ತಾಕ್ ಅವರು ‘ನಾನು ಮಾಜಿ ಮುಸ್ಲಿಂ’ ಎಂದು ಘೋಷಿಸಿಕೊಳ್ಳಬೇಕು. ‘ಇಸ್ಲಾಂ ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ’ ಎಂದು ಹೇಳಿದ ನಂತರ ಅವರು ದಸರಾ ಉದ್ಘಾಟನೆ ಮಾಡಬಹುದು. ಒಂದು ವೇಳೆ ಇದು ಸಾಧ್ಯವಿಲ್ಲವಾದರೆ, ಅವರು ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿ, ಪುಷ್ಪಾರ್ಚನೆಯಿಂದ ದೂರ ಉಳಿಯಲಿ,” ಎಂದು ಹೇಳಿದರು.
ಯತ್ನಾಳ್ ಅವರು ‘ಎಕ್ಸ್ ಮುಸ್ಲಿಂ’ ಎಂಬ ಹೊಸ ಸಮುದಾಯದ ಬಗ್ಗೆಯೂ ಮಾತನಾಡಿದರು. “ಇಡೀ ವಿಶ್ವದಲ್ಲಿ, ಇಸ್ಲಾಂ ಧರ್ಮವನ್ನು ವಿರೋಧಿಸುವವರನ್ನು ಒಳಗೊಂಡ ‘ಎಕ್ಸ್ ಮುಸ್ಲಿಂ’ ಎಂಬ ಪ್ರತ್ಯೇಕ ಸಮುದಾಯ ಸೃಷ್ಟಿಯಾಗುತ್ತಿದೆ. ಬಾನು ಮುಷ್ತಾಕ್ ಅವರು ಈ ಸಮುದಾಯಕ್ಕೆ ಸೇರ್ಪಡೆಗೊಂಡಿರುವುದನ್ನು ಸ್ಪಷ್ಟಪಡಿಸಬೇಕು,” ಎಂದು ಯತ್ನಾಳ್ ಪ್ರತಿಪಾದಿಸಿದರು.