
ನವದೆಹಲಿ: ಭಾರತದ ಸಾಂಸ್ಕೃತಿಕ ಪರಂಪರೆಗೂ ಜಾಗತಿಕ ಮಟ್ಟದಲ್ಲಿ ಮಹತ್ವದ ಮಾನ್ಯತೆ ಹಾಗೂ ಗೌರವ ದೊರೆತಿದೆ. ಭಾರತೀಯ ಜ್ಞಾನ ಪರಂಪರೆಯ ಅಮೂಲ್ಯ ಕೃತಿಗಳಾದ ಶ್ರೀಮದ್ ಭಗವದ್ಗೀತೆ ಮತ್ತು ಭರತ ಮುನಿಗಳ ನಾಟ್ಯಶಾಸ್ತ್ರಗಳನ್ನು ಯುನೆಸ್ಕೋ (UNESCO) ಸಂಸ್ಥೆ ತನ್ನ Memory of the World Register ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, “ಇದು ವಿಶ್ವದಾದ್ಯಂತ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ಕ್ಷಣ. ಶ್ರೀಮಂತ ಸಂಸ್ಕೃತಿಯ ಜಾಗತಿಕ ಮನ್ನಣೆ ಹಾಗೂ ಕಾಲಾತೀತ ಬುದ್ಧಿವಂತಿಕೆಗೆ ಇದು ಸಾಕ್ಷಿ” ಎಂದು ಹೇಳಿದರು.
ಶ್ರೀಮದ್ ಭಗವದ್ಗೀತೆ, ಭಗವಾನ್ ಕೃಷ್ಣ ಮತ್ತು ಅರ್ಜುನರ ಮಧ್ಯೆ ನಡೆದ ಪವಿತ್ರ ಸಂವಾದವಾಗಿ, ತಾತ್ವಿಕ ಹಾಗೂ ಆಧ್ಯಾತ್ಮಿಕ ಕೃತಿಯಾಗಿದೆ. ಶತಮಾನಗಳಿಂದ ಭಾರತ ಮತ್ತು ಜಗತ್ತಿನ ಹಲವಾರು ಜನಾಂಗಗಳಿಗೆ ಈ ಗ್ರಂಥ ಮಾರ್ಗದರ್ಶನವಾಗಿದೆ.
ಅದೇ ರೀತಿ, ಭರತ ಮುನಿಗಳ ನಾಟ್ಯಶಾಸ್ತ್ರವು ನೃತ್ಯ, ನಾಟಕ ಮತ್ತು ಸಂಗೀತ ಕ್ಷೇತ್ರದಲ್ಲಿ ಭಾರತೀಯ ಪರಂಪರೆ ಮತ್ತು ಶಿಸ್ತಿನ ಸಮಗ್ರ ಗ್ರಂಥವಾಗಿ ಪರಿಗಣಿಸಲಾಗುತ್ತದೆ.
ಯುನೆಸ್ಕೋದ ‘Memory of the World’ ಪಟ್ಟಿ ವಿಶ್ವದ ಶ್ರೇಷ್ಠ ದಾಖಲೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಈ ಪಟ್ಟಿ ಮೂಲಕ ಭಾರತ ತನ್ನ ವೈಭವಶಾಲಿ ಸಾಂಸ್ಕೃತಿಕ ಧಾರೆಗೆ ಮತ್ತೊಂದು ಅಂತರರಾಷ್ಟ್ರೀಯ ಗೌರವವನ್ನು ಪಡೆದಂತಾಗಿದೆ.