
ಪುತ್ತೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಜೇಶ್ ಕಿಶೋರ್ ಶೂ ಎಸೆದ ಹೇಯ ಕೃತ್ಯವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೆಡಿಎಸ್ಎಸ್) ಮತ್ತು ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ಘಟಕಗಳು ತೀವ್ರವಾಗಿ ಖಂಡಿಸಿವೆ.
ಸೋಮವಾರ ಪ್ರತ್ಯೇಕ ಪತ್ರಿಕಾಗೋಷ್ಠಿಗಳನ್ನು ನಡೆಸಿದ ಈ ಎರಡು ಸಂಘಟನೆಗಳು, ಈ ಘಟನೆಯನ್ನು “ಸಂವಿಧಾನದ ಮೇಲಿನ ದಾಳಿ” ಮತ್ತು “ದಲಿತ ವಿರೋಧಿ ಮನಸ್ಥಿತಿಯ ಅನಾವರಣ” ಎಂದು ಬಣ್ಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ.
ಕೆಡಿಎಸ್ಎಸ್‌ನಿಂದ ದಲಿತ ವಿರೋಧಿ ಮನಸ್ಥಿತಿಯ ಖಂಡನೆ
ಕೆಡಿಎಸ್ಎಸ್ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ ಅವರು ಮಾತನಾಡಿ, “ದಲಿತರೊಬ್ಬರು ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿ ಕುಳಿತು ನ್ಯಾಯ ನೀಡುವುದನ್ನು ಒಪ್ಪದ ಕೀಳು ಮನಸ್ಥಿತಿ ಇಂದಿಗೂ ಸಮಾಜದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಈ ಕೃತ್ಯ ಸ್ಪಷ್ಟ ನಿದರ್ಶನ. ಗವಾಯಿಯವರು ದಲಿತ ಸಮುದಾಯಕ್ಕೆ ಸೇರಿದವರೆಂಬ ತಾರತಮ್ಯ ಭಾವನೆಯಿಂದಲೇ ಈ ದಾಳಿ ನಡೆದಿದೆ,” ಎಂದು ಕಿಡಿಕಾರಿದರು. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಸಂಘಟನಾ ಸಂಚಾಲಕ ಪಿ. ಕೆ. ರಾಜು, ಬೆಳ್ತಂಗಡಿ ತಾಲೂಕು ಸಂಚಾಲಕ ಪದ್ಮನಾಭ ಗರ್ಗಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕ್ರಿಶ್ಚಿಯನ್ ಯೂನಿಯನ್‌ನಿಂದ ಆತಂಕ ವ್ಯಕ್ತ
ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಮೌರೀಸ್ ಮಸ್ಕರೇನಿಯಸ್ ಅವರು, “ಪರಮೋಚ್ಚ ನ್ಯಾಯಪೀಠದ ಮುಖ್ಯ ನ್ಯಾಯಮೂರ್ತಿಯವರ ಮೇಲೆ ಚಪ್ಪಲಿ ಎಸೆಯುವ ಪ್ರಯತ್ನ ಆತಂಕಕಾರಿ. ನ್ಯಾಯವಾದಿಯಾಗಿ ಕಾನೂನುಬದ್ಧ ಮಾರ್ಗಗಳನ್ನು ಅನುಸರಿಸದೆ, ಹಿಂಸಾತ್ಮಕ ಮಾರ್ಗವನ್ನು ಆರಿಸಿಕೊಂಡಿರುವುದು ಅಪಾಯಕಾರಿ ಬೆಳವಣಿಗೆ,” ಎಂದು ಕಳವಳ ವ್ಯಕ್ತಪಡಿಸಿದರು.
“ಈ ದುಷ್ಕರ್ಮಿಯ ಹಿಂದಿನ ಸೂತ್ರದಾರರು ಯಾರು? ನ್ಯಾಯಾಧೀಶರ ಮೇಲಿನ ಈ ದಾಳಿಯನ್ನು ಅತ್ಯಂತ ಖಂಡನೀಯ. ಡಾ. ರಾಕೇಶ್ ಕಿಶೋರ್ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು,” ಎಂದು ಅವರು ಆಗ್ರಹಿಸಿದರು. ಗೌರವ ಸಲಹೆಗಾರ ಜೆರೋನಿಯಸ್ ಪಾಯಸ್, ಉಪಾಧ್ಯಕ್ಷ ವಾಲ್ಟರ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.
ಉಭಯ ಸಂಘಟನೆಗಳು, ಈ ಹೇಯ ಕೃತ್ಯದ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ, ದೇಶದಲ್ಲಿ ದ್ವೇಷ ಮತ್ತು ವಿಧ್ವಂಸಕತೆಯನ್ನು ಬಿತ್ತುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ.