
ಬೆಂಗಳೂರು : ರಾಜಧಾನಿಯ ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಆಘಾತಕಾರಿ ಘಟನೆ ನಡೆದಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಮಗಳು ಮತ್ತು ಅವರ ತಾಯಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ತಂದೆಗೆ ಕೊನೆಯ ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾಗೊಂಡನಹಳ್ಳಿ ನಿವಾಸಿಗಳಾದ ಶ್ರೀಜಾ ರೆಡ್ಡಿ (25) ಮತ್ತು ಅವರ ತಾಯಿ ರಚಿತಾ ರೆಡ್ಡಿ (48) ಆತ್ಮಹತ್ಯೆ ಮಾಡಿಕೊಂಡವರು.
ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿರುವ ಶ್ರೀಧರ್ ರೆಡ್ಡಿ ಅವರು ಪತ್ನಿ ರಚಿತಾ ರೆಡ್ಡಿ ಮತ್ತು ಪುತ್ರಿ ಶ್ರೀಜಾ ರೆಡ್ಡಿ ಅವರೊಂದಿಗೆ ನಾಗೊಂಡನಹಳ್ಳಿಯ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಎಂಜಿನಿಯರಿಂಗ್ ಪದವೀಧರೆಯಾಗಿರುವ ಶ್ರೀಜಾ, ಖಾಸಗಿ ಕಂಪನಿಯೊಂದರಲ್ಲಿ ಡೇಟಾ ಅನಲಿಸ್ಟ್ (ಟೆಕ್ಕಿ) ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಚಿತಾ ಗೃಹಿಣಿಯಾಗಿದ್ದರು.
ಸೋಮವಾರ ಬೆಳಗ್ಗೆ ಶ್ರೀಧರ್ ರೆಡ್ಡಿ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪತ್ನಿ ಮತ್ತು ಮಗಳು ಕರೆ ಸ್ವೀಕರಿಸದಿದ್ದಾಗ ಆತಂಕಗೊಂಡ ಶ್ರೀಧರ್ ರೆಡ್ಡಿ ಕೂಡಲೇ ಮನೆಗೆ ಧಾವಿಸಿದ್ದಾರೆ. ಮನೆಯ ಬಾಗಿಲು ಒಡೆದು ಒಳಪ್ರವೇಶಿಸಿದಾಗ, ಕೊಠಡಿಯೊಳಗೆ ತಾಯಿ ಮತ್ತು ಮಗಳು ಇಬ್ಬರೂ ಪ್ರತ್ಯೇಕವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ವೈಟ್‌ಫೀಲ್ಡ್ ಠಾಣಾ ಪೊಲೀಸರು ತಿಳಿಸಿದ್ದಾರೆ. ಡೆತ್‌ನೋಟ್ ಪತ್ತೆಯಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.