
ಶಿವಮೊಗ್ಗ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿರುವ ಘಟನೆಯೊಂದರಲ್ಲಿ, ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 55 ವರ್ಷದ ಮೊಹಮದ್ ಝಕ್ರಿಯ ಎಂಬುವವರೇ ಸಾವನ್ನಪ್ಪಿದ ದುರ್ದೈವಿ.
ಘಟನೆಯ ವಿವರ:
ದೊಡ್ಡಪೇಟೆ ಪೊಲೀಸ್ ಠಾಣೆಯ ಪಕ್ಕದಲ್ಲೇ ಇರುವ ಪಶ್ಚಿಮ ಸಂಚಾರ ಠಾಣೆಯ ಹಿಂಭಾಗದ ಸೆಲ್‌ಗಳ ಆವರಣದಲ್ಲಿ ಮೊಹಮದ್ ಝಕ್ರಿಯ ಅವರು ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದ ಇವರು, ಕೇವಲ 3 ದಿನಗಳ ಹಿಂದಷ್ಟೇ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ನಿನ್ನೆ ರಾತ್ರಿ ನಗರದ ಬಸ್ ನಿಲ್ದಾಣದ ಬಳಿ ಸುದೀರ್ಘವಾಗಿ ಕರ್ತವ್ಯ ನಿರ್ವಹಿಸಿ ಠಾಣೆಗೆ ಮರಳಿದ್ದ ಇವರು, ರಾತ್ರಿಯ ವೇಳೆಯೇ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಾಟ್ಸಪ್‌ನಲ್ಲಿ ಹರಿದಾಡಿದ ಮರಣ ಪತ್ರ (Death Note):
ಆತ್ಮಹತ್ಯೆಗೂ ಮುನ್ನ ಝಕ್ರಿಯ ಅವರು ತಮ್ಮ ನೋವನ್ನು ವಾಟ್ಸಪ್ ಗ್ರೂಪ್ ಮೂಲಕ ಹಂಚಿಕೊಂಡಿದ್ದಾರೆ. ಇಲಾಖೆಯಲ್ಲಿ ಸುಮಾರು 26 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು, ತನ್ನ ಸಹೋದ್ಯೋಗಿ ಒಬ್ಬರಿಂದ ತೀವ್ರ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದ ಬಗ್ಗೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿ:
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ (SP) ನಿಖಿಲ್ ಬಿ. ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್‌ಪಿ ನಿಖಿಲ್, “ಮೃತ ಸಿಬ್ಬಂದಿಗೆ ಕೆಲ ಆರೋಗ್ಯ ಸಮಸ್ಯೆಗಳಿದ್ದವು ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ, ಅವರು ವಾಟ್ಸಪ್‌ನಲ್ಲಿ ಕಳುಹಿಸಿರುವ ಮರಣ ಪತ್ರದಲ್ಲಿ ಠಾಣೆಯ ಸಿಬ್ಬಂದಿಯಿಂದ ಕಿರುಕುಳವಾಗುತ್ತಿತ್ತು ಎಂಬ ಗಂಭೀರ ಆರೋಪವಿದೆ. ಕುಟುಂಬದವರು ನೀಡುವ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ತಿಳಿಸಿದ್ದಾರೆ.



































