
ಉಡುಪಿ: ಆಗಸ್ಟ್ 10ರಂದು ಶಿವಮೊಗ್ಗದಲ್ಲಿ ನಡೆದ ‘ಶಿವಮೊಗ್ಗ ಓಪನ್ 6ನೇ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧಾಕೂಟ’ದಲ್ಲಿ ಮಲ್ಪೆ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ತ್ವಿಷಾ ಕುಂದರ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಇವರು ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಕಟ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕೃಷ್ಣ ಕುಂದರ್ ಮತ್ತು ಗೀತಾ ಕರ್ಕೇರ ದಂಪತಿಯ ಪುತ್ರಿಯಾದ ತ್ವಿಷಾ, ಬುಡೋಕಾನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯ ಮುಖ್ಯ ಶಿಕ್ಷಕರಾದ ವಾಮನ್ ಪಾಲನ್ ಮತ್ತು ಮೇಘ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಈ ಸ್ಪರ್ಧಾಕೂಟದಲ್ಲಿ ಬುಡೋಕಾನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ‘ತಂಡ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಪರ್ಧಾಕೂಟದ ಆಯೋಜಕ ವಿನೋದ್ ಶಿವಮೊಗ್ಗ ಹಾಗೂ ಹಲವು ಗಣ್ಯರು ಭಾಗವಹಿಸಿದ್ದರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಡುಪಿ ಬುಡೋಕಾನ್ ಕರಾಟೆ ಕರ್ನಾಟಕದ ಅಧ್ಯಕ್ಷ ವಾಮನ್ ಪಾಲನ್, ಕಾರ್ಯದರ್ಶಿ ರಘುರಾಜ್ ಪಾಣಿಯಾಡಿ, ಕೋಶಾಧಿಕಾರಿ ಅಶೋಕ್ ಕುಲಾಲ್ ಸೇರಿದಂತೆ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.