
ಶಿವಮೊಗ್ಗ: ನಗರದ ತುಂಗಾ ನದಿ ಸೇತುವೆಯ ಮೇಲೆ ಸಂಭವಿಸಿದ ಖಾಸಗಿ ಬಸ್ ಮತ್ತು ಟ್ರಾವೆಲರ್ (TT) ವಾಹನದ ನಡುವಿನ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಆಘಾತಕಾರಿ ಘಟನೆ ಸೋಮವಾರ (ಜನವರಿ 26) ನಡೆದಿದೆ.
ಬಳ್ಳಾರಿಯಿಂದ ಶಿವಮೊಗ್ಗ ನಗರದ ಕಡೆಗೆ ಆಗಮಿಸುತ್ತಿದ್ದ ಟ್ರಾವೆಲರ್ ವಾಹನವು ಸೇತುವೆಯ ಮೇಲೆ ಸಾಗುತ್ತಿದ್ದಾಗ, ಎದುರುಗಡೆಯಿಂದ ಅಂದರೆ ಸಹ್ಯಾದ್ರಿ ಕಾಲೇಜು ಮಾರ್ಗವಾಗಿ ಬಂದ ಖಾಸಗಿ ಬಸ್ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ. ಈ ಅನಾಹುತದ ತೀವ್ರತೆಗೆ ಟಿಟಿ ವಾಹನದ ಮುಂಭಾಗವು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಚಾಲಕ ವಾಹನದೊಳಗೆ ಸಿಲುಕಿಕೊಂಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ವಾಹನ ಸವಾರರು ಗಾಯಾಳು ಚಾಲಕನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.
ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ತುಂಗಾ ಸೇತುವೆಯ ಮಧ್ಯಭಾಗದಲ್ಲೇ ಈ ಅಪಘಾತ ನಡೆದಿದ್ದರಿಂದ ಉಭಯ ಮಾರ್ಗಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದ ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಾಹನಗಳನ್ನು ತೆರವುಗೊಳಿಸುವ ಮೂಲಕ ಸಂಚಾರ ಸುಗಮಗೊಳಿಸಿದರು. ಸದ್ಯ ಈ ಬಗ್ಗೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



































