
ಉಡುಪಿ: ಶಿರೂರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಭೆಯನ್ನು ನವೆಂಬರ್ 7ರಂದು ಸಾಯಂಕಾಲ 4.30ಕ್ಕೆ ಸೋದೆ ಮಠದ ಬಳಿಯ ವಿದ್ಯೋದಯ ಪಿ.ಯು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಿರೂರು ಮಠದ ದಿವಾನ್ ಡಾ. ಉದಯಕುಮಾರ್ ಸರಳತ್ತಾಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಭೆಯು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯಲಿದೆ.
ಪರ್ಯಾಯೋತ್ಸವದ ಸಿದ್ಧತೆ ಮತ್ತು ಕಾಮಗಾರಿಗಳು
“ಶೀರೂರು ಪರ್ಯಾಯ ನಮ್ಮ ಪರ್ಯಾಯ” ಎಂಬ ಧೈಯವಾಕ್ಯದೊಂದಿಗೆ ಜಿಲ್ಲೆಯ ಪ್ರತಿ ಮನೆಗಳಿಗೂ ಆಮಂತ್ರಣ ಪತ್ರಿಕೆಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
- ಮುಹೂರ್ತಗಳು: ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ಮತ್ತು ಕಟ್ಟಿಗೆ ಮುಹೂರ್ತಗಳು ಈಗಾಗಲೇ ಸಂಪನ್ನಗೊಂಡಿದ್ದು, ಕೊನೆಯದಾದ ಧಾನ್ಯ ಮುಹೂರ್ತವು ಡಿಸೆಂಬರ್ 14 ರಂದು ನಡೆಯಲಿದೆ.
- ನಗರಸಭೆ ಕೊಡುಗೆ: ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು ಮಾತನಾಡಿ, ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ₹50 ಲಕ್ಷ ರೂ. ವೆಚ್ಚದಲ್ಲಿ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ನಡೆಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ₹10 ಕೋಟಿ ರೂ. ವೆಚ್ಚದಲ್ಲಿ ನಗರದ ರಸ್ತೆಗಳ ದುರಸ್ತಿಗೆ ಟೆಂಡರ್ ಕರೆಯಲಾಗುತ್ತಿದ್ದು, ಡಿಸೆಂಬರ್ ಒಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಪುರಪ್ರವೇಶ ಮತ್ತು ಹೊರೆ ಕಾಣಿಕೆ
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಅವರು ಮಾತನಾಡಿ, ಪರ್ಯಾಯ ಪೀಠಾರೋಹಣಗೈಯಲಿರುವ ಶ್ರೀಪಾದರು ಜನವರಿ 9ರಂದು ಪುರಪ್ರವೇಶ ಮಾಡಲಿದ್ದಾರೆ. ಅಂದು ಸಾಯಂಕಾಲ 3:30ಕ್ಕೆ ಕಡಿಯಾಳಿಯಲ್ಲಿ ಶ್ರೀಪಾದರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ ಕರೆತರಲಾಗುವುದು. ನಂತರ ನಗರ ಸಭೆ ವತಿಯಿಂದ ಭಾವೀ ಪರ್ಯಾಯ ಶ್ರೀಗಳವರಿಗೆ ರಥಬೀದಿಯಲ್ಲಿ ಪೌರ ಸಮ್ಮಾನ ನಡೆಯಲಿದೆ.
ಇದಲ್ಲದೆ, ಜನವರಿ 10 ರಿಂದ 17 ರವರೆಗೆ ದಿನಂಪ್ರತಿ ಅದ್ದೂರಿಯ ಹೊರೆ ಕಾಣಿಕೆಯ ಮೆರವಣಿಗೆ ನಡೆಯಲಿದೆ. ಹೊರೆಕಾಣಿಕೆಯಲ್ಲಿ ಬಂದ ಎಲ್ಲಾ ಪರಿಕರಗಳನ್ನು ಶ್ರೀಮಠದ ವಾಹನ ನಿಲುಗಡೆ ಸಮೀಪ (ರಾಜಾಂಗಣ ಪಾರ್ಕಿಂಗ್) ಅಚ್ಚುಕಟ್ಟಾಗಿ ಜೋಡಿಸಿ, ವಸ್ತು ಪ್ರದರ್ಶನ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಸಂದರ್ಭದಲ್ಲಿ ಹೊರೆಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಮೋಹನ ಭಟ್, ಮತ್ತು ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಉಪಸ್ಥಿತರಿದ್ದರು.



































