
ಶಿವಮೊಗ್ಗ: ಜಿಲ್ಲೆಯ ಅರಸಾಳು ಸಮೀಪದ ಸೂಡುರು ಬಳಿಯ 9ನೇ ಮೈಲುಗಲ್ಲಿನಲ್ಲಿ ಮಂಗಳವಾರ ತಡರಾತ್ರಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ಸೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದೆ. ರಿಪ್ಪನ್‌ಪೇಟೆಯಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಈ ವಾಹನದಲ್ಲಿ ಇಂಜಿನ್ ದೋಷದಿಂದಾಗಿ ಜ್ವಾಲೆ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಬಸ್ ಸುಟ್ಟು ಕರುಕಲಾಗಿದೆ.
ಬಸ್ಸಿನಲ್ಲಿ ಚಾಲಕ ಸೇರಿ ಸುಮಾರು 40 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಚಾಲಕ ತಕ್ಷಣವೇ ಸಮಯಪ್ರಜ್ಞೆಯಿಂದ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಹೊರಬರಲು ಸೂಚಿಸಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಆದರೂ, ಗಾಬರಿಯಲ್ಲಿ ಕೆಳಗಿಳಿಯುವಾಗ ಹಾಗೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಮಾರು 7 ರಿಂದ 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೊದಲು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



































