
ಬೆಂಗಳೂರು : ನಟ ಯಶ್ ಅವರ ತಾಯಿ ಹಾಗೂ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅವರು, ದೀಪಿಕಾ ದಾಸ್ ಅವರೊಂದಿಗಿನ ವೈಮನಸ್ಸಿನ ಬಗ್ಗೆ ಮತ್ತೊಮ್ಮೆ ಬಹಿರಂಗವಾಗಿ ಮಾತನಾಡಿದ್ದು, ಇಬ್ಬರ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಪುಷ್ಪಾ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ವೈಮನಸ್ಸಿನ ಬಗ್ಗೆ ಸ್ಪಷ್ಟನೆ
ಸಂದರ್ಶನವೊಂದರಲ್ಲಿ, ನಟಿ ದೀಪಿಕಾ ದಾಸ್ ಅವರ ಬಗ್ಗೆ ಪುಷ್ಪಾ ಅರುಣ್ ಕುಮಾರ್ ಹೇಳಿದ್ದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಅದಕ್ಕೆ ಪ್ರತಿಕ್ರಿಯೆಯಾಗಿ ದೀಪಿಕಾ ದಾಸ್ ಕೂಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪುಷ್ಪಾ, “ನಮ್ಮ ಕುಟುಂಬದ ವಿಚಾರದಲ್ಲಿ ಮಾಧ್ಯಮದವರು ತಲೆ ಹಾಕಬಾರದು. ಹೌದು, ನನಗೂ ಮತ್ತು ದೀಪಿಕಾ ದಾಸ್‌ಗೂ ವೈಮನಸ್ಸು ಇರುವುದು ನಿಜ” ಎಂದು ಹೇಳಿದ್ದಾರೆ.
ಕುಟುಂಬದ ಆಂತರಿಕ ವಿಷಯ
“ವೈಮನಸ್ಸಿಗೆ ಕಾರಣ ಏನೆಂದು ನಾನು ಹೇಳಲು ಇಷ್ಟಪಡುವುದಿಲ್ಲ. ಏಕೆಂದರೆ ನಾನು ಅದನ್ನು ಬಹಿರಂಗಪಡಿಸಿದರೆ ದೀಪಿಕಾಳಿಗೆ ತೊಂದರೆಯಾಗಬಹುದು. ನಾವು ನಮ್ಮ ಮಗ ಯಶ್‌ಗೂ ಹೀಗೆಯೇ ಮಾತನಾಡುತ್ತೇವೆ, ಆಕೆ (ದೀಪಿಕಾ) ಕೂಡ ನಮ್ಮ ಮನೆಯ ಮಗಳು. ಇದು ನಮ್ಮ ಕುಟುಂಬದ ಆಂತರಿಕ ವಿಷಯ” ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತೀರಾ ಎಂಬ ಪ್ರಶ್ನೆಗೆ, “ನಾನು ಹಾಸನದಲ್ಲಿರುತ್ತೇನೆ, ಆಗಾಗ ಬೆಂಗಳೂರಿಗೆ ಬರುತ್ತೇನೆ. ನನ್ನ ಮಗ ಮತ್ತು ಮಗಳ ಮನೆ ಸೇರಿದಂತೆ ನಮಗೆ ಹಲವು ಮನೆಗಳಿವೆ. ಆದರೆ ನಾವು ಒಂದೇ ಮನೆಯಲ್ಲಿ ವಾಸಿಸುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
‘ಘಾಟಿ’ ಸಿನಿಮಾ ವಿತರಣೆಯಲ್ಲಿ ಪುಷ್ಪಾ:
ಸಿನಿಮಾ ನಿರ್ಮಾಣ ಮತ್ತು ವಿತರಣಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿರುವ ಪುಷ್ಪಾ ಅರುಣ್ ಕುಮಾರ್, ಸದ್ಯ ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದೆ.