
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಕ್ಕೆ ಸಂಬಂಧಿಸಿದಂತೆ ತಿರುವನಂತಪುರ ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ವಿರುದ್ಧ ಪಕ್ಷದ ನಾಯಕರಿಂದ ಅಸಮಾಧಾನದ ಧ್ವನಿ ಹೊರಹೊಮ್ಮಿದೆ. ಈ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ತರೂರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಖರ್ಗೆಯವರು , “ಕಾಂಗ್ರೆಸ್ ಯಾವಾಗಲೂ ‘ದೇಶ ಮೊದಲು’ ಎಂಬ ನಿಲುವಿಗೆ ಬದ್ಧವಾಗಿದೆ. ಆದರೆ ಕೆಲವರು ‘ಮೋದಿ ಮೊದಲು, ದೇಶ ನಂತರ’ ಎಂಬ ರೀತಿ ನಡೆದುಕೊಳ್ಳುತ್ತಿದ್ದಾರೆ,” ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಈ ಹೇಳಿಕೆಯ ಕೆಲವೇ ಗಂಟೆಗಳ ಬಳಿಕ ಶಶಿ ತರೂರ್ ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದು“ಹಾರಲು ಅನುಮತಿ ಕೇಳುವ ಅಗತ್ಯವಿಲ್ಲ. ರೆಕ್ಕೆಗಳು ನಿಮ್ಮದು ಮತ್ತು ಆಕಾಶ ಯಾರಿಗೂ ಸೇರಿಲ್ಲ,” ಎಂಬ ಪದಗಳೊಂದಿಗೆ ಮರದ ಕೊಂಬೆಯ ಮೇಲೆ ಹಕ್ಕಿಯ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತರೂರ್ ಅವರು ಪ್ರಧಾನಿ ಮೋದಿಯವರ ಆಡಳಿತ ಹಾಗೂ ಸಾಧನೆಗಳನ್ನು ಸಾರ್ವಜನಿಕವಾಗಿ ಶ್ಲಾಘಿಸುತ್ತಲೇ ಬಂದಿದ್ದಾರೆ. ಇದರಿಂದಾಗಿ ಅವರು ಬಿಜೆಪಿಗೆ ಸೇರುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಟ್ವೀಟ್ ಸಹ ಅದರ ಭಾಗವಾಗಿರುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ತರೂರ್ ಅವರು ಪಕ್ಷ ತೊರೆಯಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲದಿದ್ದರೂ, ಈ ಬೆಳವಣಿಗೆಗಳು ಕಾಂಗ್ರೆಸ್‌ನಲ್ಲಿ ಅಂತರ್ದ್ವಂದ್ವಕ್ಕೆ ಎಡೆಮಾಡಿಕೊಟ್ಟಿವೆ.