
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆದಿನದ ಬಂದ್‌ಗೆ ಕರೆ ನೀಡಿದ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮುಖಂಡ ಶರಣ್ ಪಂಪ್‌ವೆಲ್ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಮಂಗಳೂರಿನ ಕದ್ರಿ ಠಾಣೆಯ ಪೊಲೀಸರು ಶರಣ್ ಅವರನ್ನು ನಿನ್ನೆ ಸಂಜೆ ಬಂಧಿಸಿದ್ದರು.
ಬಂದ್‌ಗೆ ಕರೆ ನೀಡಿದ ಪ್ರಕರಣ ಮತ್ತು ನಿನ್ನೆ ನಡೆದ ಮತ್ತೊಂದು ಹತ್ಯೆ ಪ್ರಕರಣದ ಬಳಿಕ ಮುಸ್ಲಿಂ ಮುಖಂಡರಲ್ಲಿ ಮೂಡಿದ ಆಕ್ರೋಶ ಶರಣ್ ಪಂಪ್‌ವೆಲ್ ಬಂಧನಕ್ಕೆ ಕಾರಣವಾಗಿದ್ದು , ಶರಣ್ ಬಂಧನದ ಬೆನ್ನಲ್ಲೇ ಕದ್ರಿ ಪೊಲೀಸ್ ಠಾಣೆ ಮುಂದೆ ಹಿಂದೂ ಕಾರ್ಯಕರ್ತರು ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಂಧನದ ಬಳಿಕ ಶರಣ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳಿಕ ಅವರನ್ನು ಮಂಗಳೂರಿನ ಬೋಂದೆಲ್‌ನ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ ಪೊಲೀಸರು, ನ್ಯಾಯಾಧೀಶರ ವಿಚಾರಣೆ ಬಳಿಕ ಜಾಮೀನು ನೀಡಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ವಿಹೆಚ್‌ಪಿ ಮುಖಂಡ ಪ್ರದೀಪ್ ಸರಿಪಲ್ಲ, “ಮುಸ್ಲಿಮರನ್ನು ಓಲೈಕೆ ಮಾಡಲು ಸರ್ಕಾರದಿಂದಲೇ ಪೊಲೀಸರಿಗೆ ಒತ್ತಡ ಬಂದಿದೆ. 20 ದಿನಗಳ ಹಿಂದೆ ನಡೆದ ಬಂದ್‌ಗೆ ಈಗ ಬಂಧನ ಯಾಕೆ? ಇದು ಜಾಮೀನಾಗುವ ಕೇಸ್. ಶರಣ್ ಅವರನ್ನು ಜೈಲಿಗೆ ಹಾಕಿದರೆ ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಹೊಣೆಗಾರ” ಎಂದು ಎಚ್ಚರಿಕೆ ನೀಡಿದರು.
ಅಂತಿಮವಾಗಿ ಶರಣ್ ಪಂಪ್‌ವೆಲ್ ಅವರಿಗೆ ಜಾಮೀನು ನೀಡಲಾಗಿದ್ದು, ಹಿಂದೂ ಕಾರ್ಯಕರ್ತರು ನಿರಾಳವಾಗಿ ಅಲ್ಲಿಂದ ಚದುರಿದಿದ್ದಾರೆ.