
ಮಂಗಳೂರು: ಕೆಂಪುಕಲ್ಲು ಗಣಿಗಾರಿಕೆ ಮತ್ತು ವಿತರಣೆಯಲ್ಲಿರುವ ಗೊಂದಲಗಳನ್ನು ನಿವಾರಿಸಿ, ಜನಸಾಮಾನ್ಯರಿಗೆ ಸುಲಭವಾಗಿ ಕೆಂಪುಕಲ್ಲು ಲಭ್ಯವಾಗುವಂತೆ ಮಾಡಲು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಹತ್ವದ ಘೋಷಣೆ ಮಾಡಿದ್ದಾರೆ. ಮರಳು ವಿತರಣೆಗೆ ಜಾರಿಯಲ್ಲಿದ್ದ ‘ಸ್ಯಾಂಡ್ ಬಜಾರ್’ ಆ್ಯಪ್ ಮಾದರಿಯಲ್ಲೇ, ಕೆಂಪುಕಲ್ಲು ಖರೀದಿಗಾಗಿ ಪ್ರತ್ಯೇಕ ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ನೂತನ ಆ್ಯಪ್ ಮೂಲಕ ಸರ್ಕಾರಿ ನಿಗದಿತ ದರದಲ್ಲಿ ಕೆಂಪುಕಲ್ಲನ್ನು ಅಗತ್ಯವಿರುವವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಮರಳು ವಿತರಣೆಯ ಸ್ಯಾಂಡ್ ಬಜಾರ್ ಆ್ಯಪ್ ಯಶಸ್ವಿಯಾದಂತೆ, ಕೆಂಪುಕಲ್ಲು ಆ್ಯಪ್ ಕೂಡ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಕೆಂಪುಕಲ್ಲು ಸಿಗುವಂತೆ ಮಾಡಲಿದೆ. ಜಿಲ್ಲೆಯಲ್ಲಿ ಕೆಂಪುಕಲ್ಲು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರೊಂದಿಗೆ ಬೆಂಗಳೂರಿನಲ್ಲಿ ಈಗಾಗಲೇ ಎರಡನೇ ಹಂತದ ಸಭೆ ನಡೆಸಲಾಗಿದೆ ಎಂದು ಖಾದರ್ ಮಾಹಿತಿ ನೀಡಿದ್ದಾರೆ.