
ಬೆಂಗಳೂರು, ಮೇ 9: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಂಟಾದ ಉಗ್ರ ದಾಳಿಗೆ ಭಾರತೀಯ ಸೇನೆಯು ‘ಆಪರೇಷನ್ ಸಿಂದೂರ’ ಮೂಲಕ ತೀವ್ರ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ, ದೇಶದ ಗಡಿ ಭಾಗಗಳಲ್ಲಿ ಯುದ್ಧದ ಭೀತಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಗುಪ್ತಚರ ಇಲಾಖೆ ರಾಜ್ಯಾದ್ಯಂತ ಭದ್ರತೆಯ ಮಟ್ಟ ಹೆಚ್ಚಿಸಲು ತುರ್ತು ಸೂಚನೆ ನೀಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ತಪಾಸಣೆ ಹಾಗೂ ವೀಕ್ಷಣೆಯು ಹೆಚ್ಚಿಸಲ್ಪಟ್ಟಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ಶಾಪಿಂಗ್ ಮಾಲ್, ಧಾರ್ಮಿಕ ಸ್ಥಳಗಳತ್ತ ವಿಶೇಷ ಗಮನ ಹರಿಸಲಾಗುತ್ತಿದೆ.
ಗುಪ್ತಚರ ಇಲಾಖೆಯು ನಿಷಿದ್ಧ ಸಂಘಟನೆಗಳಿಗೆ ಸೇರಿರುವವರು, ಭಯೋತ್ಪಾದನೆಗೆ ಸಂಬಂಧಿಸಿದ ಕೃತ್ಯಗಳಲ್ಲಿ ಭಾಗಿಯಾದವರು, ದೇಶದ ಶಾಂತಿಗೆ ಧಕ್ಕೆಯುಂಟು ಮಾಡುವ ಬಗೆಯಲ್ಲಿ ಪ್ರಚೋದನಾತ್ಮಕ ಭಾಷಣ ಅಥವಾ ಪೋಸ್ಟ್ ಮಾಡುವವರು, ತಾಂತ್ರಿಕ ಸಾಧನಗಳನ್ನು ಬಳಸುವ ಮೂಲಕ ಅಶಾಂತಿಯ ಗಾಳಿ ಹರಡುವವರ ಮೇಲೆ ಕಣ್ಣಿಡಲು ಎಲ್ಲ ಜಿಲ್ಲೆಗಳಿಗೂ ಸೂಚನೆ ನೀಡಿದೆ.
ಅದರಲ್ಲೂ, ಅನುಮಾನಾಸ್ಪದ ವ್ಯಕ್ತಿಗಳು, ಹೋಟೆಲ್‌ಗಳಲ್ಲಿ ತಂಗಿರುವವರ ದಾಖಲಾತಿಗಳು, ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.