
ಉಡುಪಿ : ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ವೊಬ್ಬ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಓರ್ವ ಯುವತಿಯನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಅಪಾರ್ಟ್‌ಮೆಂಟ್‌ನ ಮನೆಯ ಮಾಲೀಕರು ತಮ್ಮ ಬೀಗವನ್ನು ಸೆಕ್ಯೂರಿಟಿ ಗಾರ್ಡ್‌ನ ಬಳಿ ನೀಡಿ ಹೊರಗೆ ತೆರಳಿದ್ದಾಗ, ಚಾಲಾಕಿ ಗಾರ್ಡ್ ಈ ಅವಕಾಶವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಮಾಲೀಕರ ಅನುಪಸ್ಥಿತಿಯಲ್ಲಿ ಮನೆಯ ಕೀಗಳನ್ನು ಬಳಸಿಕೊಂಡು ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದವರಿಗೆ ಮನೆಯ ಕೀಗಳನ್ನು ಒಂದು ಸಾವಿರ ರೂಪಾಯಿಗೆ ನೀಡುತ್ತಿದ್ದ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಓರ್ವ ಯುವತಿಯನ್ನು ರಕ್ಷಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬನಿಗೆ ಬಲೆ ಬೀಸಿದ್ದಾರೆ. ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.