
ಬೆಂಗಳೂರು, ಫೆಬ್ರವರಿ.22: ರಾಜ್ಯದಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಗಳಿಗಾಗಿ ಸಂಪೂರ್ಣ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾರ್ಚ್ 1ರಿಂದ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈ ಪರೀಕ್ಷೆಗಳಿಗೆ ರಾಜ್ಯದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 7,13,862 ವಿದ್ಯಾರ್ಥಿಗಳು ಹಾಗೂ ಎಸೆಸೆಲ್ಸಿಗೆ 8,96,447 ವಿದ್ಯಾರ್ಥಿಗಳು ಹೆಸರನ್ನು ದಾಖಲಿಸಿದ್ದಾರೆ.
ಪರೀಕ್ಷೆಗಳನ್ನು ನಡೆಸಲು ಪ್ರತ್ಯೇಕ ಕೇಂದ್ರಗಳನ್ನು ಒದಗಿಸಲಾಗಿದ್ದು, ಪಿಯುಸಿ ಪರೀಕ್ಷೆಗೆ 1,171 ಮತ್ತು ಎಸೆಸೆಲ್ಸಿಗೆ 2,818 ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗಳ ಅವಧಿಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ವಲಯವೆಂದು ಘೋಷಿಸಿ, ಜೆರಾಕ್ಸ್, ಸೈಬರ್ ಸೆಂಟರ್ ಹಾಗೂ ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಲಾಗುತ್ತದೆ.
ಮೌಲ್ಯಮಾಪನ ಪ್ರಕ್ರಿಯೆ ಸುವ್ಯವಸ್ಥಿತವಾಗಿರಲು ದ್ವಿತೀಯ ಪಿಯುಸಿ ಪರೀಕ್ಷೆಗೆ 31,000 ಹಾಗೂ ಎಸೆಸೆಲ್ಸಿಗೆ 65,000 ಮೌಲ್ಯಮಾಪಕರನ್ನು ನೇಮಕ ಮಾಡಲಾಗಿದೆ. ಯಾವುದೇ ಅಕ್ರಮ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.