
ಹೆಬ್ರಿ : “ಸುಭದ್ರ ಸರಕಾರ ರಚನೆಯಾದರೆ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಸಾಧ್ಯ. ಆ ನಿಟ್ಟಿನಿಲ್ಲಿ ಗುಪ್ತ ಮತದಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗಳನ್ನು ಬಾಲ್ಯದಲ್ಲಿಯೇ ಮಕ್ಕಳು ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಚುನಾವಣೆಗಳ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಸಮಾಜದ ವ್ಯವಸ್ಥೆಗಳು ಸುಸ್ಥಿರವಾಗಿರಬೇಕಾದರೆ ಆಡಳಿತ ವ್ಯವಸ್ಥೆಯ ಪ್ರಾಥಮಿಕ ಜ್ಞಾನವನ್ನು ಬಾಲ್ಯದಲ್ಲಿಯೇ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು” ಎಂದು ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು. ಅವರು ಮುದ್ರಾಡಿಯ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನೇತಾಜಿ ಮತದಾರರ ಸಾಕ್ಷರತ ಕ್ಲಬ್ ಆಶ್ರಯದಲ್ಲಿ ನಡೆದ 2025 -26 ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಚುನಾವಣೆಯ ಮಹತ್ವದ ಕುರಿತು ಮಾತನಾಡಿದರು.
ಶಾಲಾ ಅಧ್ಯಾಪಕರಾದ ಪಿ. ವಿ. ಆನಂದ ಅವರು ಅಧ್ಯಕ್ಷಾಧಿಕಾರಿಯಾಗಿ, ಶ್ಯಾಮಲಾ ಕೊಠಾರಿ ಒಂದನೇ ಮತಗಟ್ಟೆ ಅಧಿಕಾರಿಯಾಗಿ, ಚಂದ್ರಕಾಂತಿ ಹೆಗ್ಡೆ ಎರಡನೇ ಮತಗಟ್ಟೆ ಅಧಿಕಾರಿಯಾಗಿ, ಮಹೇಶ್ ನಾಯ್ಕ್ ಕೆ. ಮೂರನೇ ಮತಗಟ್ಟೆ ಅಧಿಕಾರಿಯಾಗಿ, ಶಾಲಾ ವಿದ್ಯಾರ್ಥಿ ಯಕ್ಷಿತ್ ಆರಕ್ಷಕ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದರು. ವಿದ್ಯಾರ್ಥಿ ಸರಕಾರದ ಮಾರ್ಗದರ್ಶಿ ಶಿಕ್ಷಕರಾದ ರಘುಪತಿ ಹೆಬ್ಬಾರ್ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಶಾಲಾ ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ಮುಖ್ಯಮಂತ್ರಿಯಾಗಿ 10 ನೇ ತರಗತಿಯ ಕಾರ್ತಿಕ್ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರತೀಕ್ ಆಯ್ಕೆಯಾದರು. ವಿಜೇತರಾದ ಅಭ್ಯರ್ಥಿಗಳನ್ನು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.