
ದೇಶದ ಗಡಿ ಕಾಯುವ ಕಾಯಕದಲ್ಲಿ ತನ್ನ ಎರಡು ಕಾಲುಗಳನ್ನೇ ಸಮರ್ಪಿಸಿ ವ್ಹೀಲ್‌ಚೇರ್ ಮೇಲೆ ಜೀವನ ಸಾಗಿಸುತ್ತಿರುವ ವೀರ ಯೋಧನೊಬ್ಬನಿಗೆ ಉಡುಪಿಯ ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿ ಅವಮಾನಿಸಿರುವ ಅಮಾನವೀಯ ಘಟನೆ ನಡೆದಿದೆ. 77ನೇ ಗಣರಾಜ್ಯೋತ್ಸವದ ಸಂಭ್ರಮದ ಮುನ್ನಾದಿನವೇ ಈ ಕಹಿ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರಗಳು:
ಕಾಸರಗೋಡು ಮೂಲದ, 21 ಪ್ಯಾರಾ ಮಿಲಿಟರಿ ಘಟಕದ ನಿವೃತ್ತ ಆರ್ಮಿ ಕಮಾಂಡೋ ಶ್ಯಾಮರಾಜ್ ಅವರು ಈ ಅನ್ಯಾಯಕ್ಕೆ ಒಳಗಾದವರು. ‘ಆಪರೇಷನ್ ಪರಾಕ್ರಮ್’ ಯುದ್ಧದ ವೇಳೆ ಸಂಭವಿಸಿದ ಲ್ಯಾಂಡ್ ಮೈನ್ ಸ್ಫೋಟದಲ್ಲಿ ಸಿಲುಕಿ ತಮ್ಮ ಕಾಲುಗಳನ್ನು ಕಳೆದುಕೊಂಡಿರುವ ಇವರು, ಸಂಪೂರ್ಣ ಅಂಗವೈಕಲ್ಯ ಎದುರಿಸುತ್ತಿದ್ದಾರೆ. ಜನವರಿ 25ರ ಭಾನುವಾರ ರಾತ್ರಿ ತಮ್ಮ ಪತ್ನಿಯ ಪೋಸ್ಟಿಂಗ್ ನಿಮಿತ್ತ ದೆಹಲಿಗೆ ತೆರಳುತ್ತಿದ್ದಾಗ ಸಾಸ್ತಾನದ ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿ ಇವರನ್ನು ತಡೆದಿದ್ದಾರೆ.
ತಮ್ಮ ಬಳಿ ಟೋಲ್ ವಿನಾಯಿತಿಗೆ ಸಂಬಂಧಿಸಿದ ಆರ್‌ಎಂಎ (RMA) ಅಧಿಕೃತ ದಾಖಲೆಗಳಿದ್ದರೂ, ಅಲ್ಲಿನ ಸಿಬ್ಬಂದಿಗಳಾದ ಶಿವರಾಮ್ ಮತ್ತು ಸುರೇಶ್ ಎಂಬುವವರು ಹಣ ಪಾವತಿಸುವಂತೆ ಪಟ್ಟು ಹಿಡಿದಿದ್ದಾರೆ. “ದೇಶಾದ್ಯಂತ ಎಲ್ಲೂ ಹಣ ಕೇಳಿಲ್ಲ, ಇಲ್ಲಿ ಮಾತ್ರ ಏಕೆ ಹೀಗೆ?” ಎಂದು ಪ್ರಶ್ನಿಸಿದರೂ ಸಿಬ್ಬಂದಿ ಮಣಿಯದೆ ಕಿರಿಕಿರಿ ಉಂಟುಮಾಡಿದ್ದಾರೆ. ಇದರಿಂದ ಮನನೊಂದ ಯೋಧ ಶ್ಯಾಮರಾಜ್ ಅವರು ವೀಡಿಯೋ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ನಾನು ಭಿಕ್ಷುಕನಲ್ಲ, ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ನನ್ನನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಟೋಲ್ ಸಿಬ್ಬಂದಿ ಕೊನೆಗೆ ಕ್ಷಮೆಯಾಚಿಸಿದ್ದಾರೆ. ಆದರೆ ಗಣರಾಜ್ಯೋತ್ಸವದ ಹೊತ್ತಲ್ಲೇ ಒಬ್ಬ ದೇಶಪ್ರೇಮಿಗೆ ಆದ ಈ ಅವಮಾನ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.



































