
ತಿರುವನಂತಪುರಂ: ಮೂರು ವರ್ಷಗಳ ಹಿಂದೆ ಕಾಗೆಯೊಂದು ಹೊತ್ತೊಯ್ದಿದ್ದ ಚಿನ್ನದ ಬಳೆಯೊಂದು ಮರಳಿ ತನ್ನ ಮಾಲೀಕರ ಕೈ ಸೇರಿರುವ ಅಚ್ಚರಿಯ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತ್ರಿಕ್ಕಲಂಗೋಡ್‌ನಲ್ಲಿ ನಡೆದಿದೆ.
ಮೂರು ವರ್ಷಗಳ ಹಿಂದೆ, ರುಕ್ಮಿಣಿ ಎಂಬುವವರು ಕೆಲಸ ಮಾಡುವಾಗ ತಮ್ಮ ಒಂದೂವರೆ ಪವನ್ ತೂಕದ (12 ಗ್ರಾಂ) ಚಿನ್ನದ ಬಳೆಯನ್ನು ಕೈಯಿಂದ ತೆಗೆದಿಟ್ಟಿದ್ದರು. ಕ್ಷಣಾರ್ಧದಲ್ಲಿ, ಅಲ್ಲಿಗೆ ಬಂದ ಕಾಗೆಯೊಂದು ಆ ಬಳೆಯನ್ನು ಎಗರಿಸಿ ಹಾರಿಹೋಗಿತ್ತು. ಕಳೆದುಹೋದ ಬಳೆಗಾಗಿ ಕೆಲವು ದಿನ ಹುಡುಕಾಡಿದ ರುಕ್ಮಿಣಿ ಕುಟುಂಬ, ನಂತರ ಅದರ ಆಸೆಯನ್ನು ಕೈಬಿಟ್ಟಿತ್ತು.

ಆದರೆ, ಮೂರು ತಿಂಗಳ ಹಿಂದೆ, ಅನ್ವರ್ ಸಾದತ್ ಎಂಬುವವರು ತೆಂಗಿನಕಾಯಿ ಕೀಳಲು ಹೋಗಿದ್ದಾಗ, ತಮ್ಮ ಮಗಳಿಗಾಗಿ ಮಾವು ಕೀಳಲು ಅನುಮತಿ ಪಡೆದು ಮರ ಹತ್ತಿದ್ದಾರೆ. ಮರದ ಕೊಂಬೆಯನ್ನು ಅಲ್ಲಾಡಿಸಿದಾಗ, ಕೆಳಗೆ ಹೊಳೆಯುವ ವಸ್ತುವೊಂದು ಬಿದ್ದಿದೆ. ಇದನ್ನು ಅವರ ಪುತ್ರಿ ಫಾತಿಮಾ ಹುದಾ ಗಮನಿಸಿದ್ದಾಳೆ. ಅದು ಬಳೆಯ ತುಂಡಾಗಿದ್ದು, ಪರಿಶೀಲಿಸಿದಾಗ ಅಸಲಿ ಚಿನ್ನವೆಂದು ಖಚಿತವಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಚಿನ್ನದ ಬಳೆ ರುಕ್ಮಿಣಿ ಅವರ ಮನೆಯಿಂದ ಕೇವಲ 50 ಮೀಟರ್ ದೂರದಲ್ಲೇ ಪತ್ತೆಯಾಗಿದೆ.
ಅನ್ವರ್ ಸಾದತ್ ಅವರ ಪ್ರಾಮಾಣಿಕತೆ:
ಅನ್ವರ್ ಸಾದತ್ ಅವರು ಈ ಚಿನ್ನದ ಬಳೆಯನ್ನು ಊರಿನ ಲೈಬ್ರರಿಗೆ ಕೊಟ್ಟು, ಅದರ ನಿಜವಾದ ಮಾಲೀಕರನ್ನು ತಲುಪಿಸುವಂತೆ ಮನವಿ ಮಾಡುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ, ರುಕ್ಮಿಣಿ ತಮ್ಮ ಪತಿಯೊಂದಿಗೆ ಲೈಬ್ರರಿಗೆ ತೆರಳಿ ಬಳೆ ತನ್ನದೇ ಎಂದು ಖಚಿತಪಡಿಸಿಕೊಂಡಿದ್ದಾರೆ. ಕಳೆದುಹೋಗಿದ್ದ ತಮ್ಮ ಬಳೆಯನ್ನು ಕಂಡು ರುಕ್ಮಿಣಿ ತುಂಬಾ ಖುಷಿಯಾಗಿದ್ದಾರೆ. ಬಳೆಯನ್ನು ಪತ್ತೆಹಚ್ಚಿದವರ ಕೈಯಿಂದಲೇ ಅದನ್ನು ಪಡೆಯಬೇಕು ಎಂಬ ರುಕ್ಮಿಣಿ ಅವರ ಮನವಿ ಮೇರೆಗೆ, ಊರಿನವರು ಅನ್ವರ್ ಸಾದತ್ ಕೈಯಿಂದಲೇ ರುಕ್ಮಿಣಿ ಅವರಿಗೆ ಬಳೆಯನ್ನು ಮರಳಿ ಕೊಡಿಸಿದ್ದಾರೆ. “ಈ ಬಳೆ ಮರಳಿ ಸಿಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ,” ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಘಟನೆ ಪ್ರಾಮಾಣಿಕತೆ ಮತ್ತು ಅದೃಷ್ಟಕ್ಕೆ ಸಾಕ್ಷಿಯಾಗಿದೆ.