
ಸಕಲೇಶಪುರ: ಶಿರಡಿ ಘಾಟ್ ಪ್ರದೇಶದಲ್ಲಿ ವರುಣನ ಆರ್ಭಟಕ್ಕೆ ಸಂಪರ್ಕ ಕಡಿದುಕೊಂಡ ಮಂಗಳೂರು-ಬೆಂಗಳೂರು. ಘಾಟ್ ರಸ್ತೆ ಮತ್ತು ರೈಲ್ವೆ ಮಾರ್ಗಗಳಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಮರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭಾರಿ ಗಾತ್ರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ, ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಂತು ಹೋಗಿದೆ. ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಮರ ಬಿದ್ದಿದ್ದರೂ, ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಈ ಘಟನೆಯನ್ನು ಗಮನಿಸಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪ್ರಸ್ತುತ ಮಳೆಯ ನಡುವೆಯೇ ರಕ್ಷಣಾ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಪೊಲೀಸರು, ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.
ರೈಲ್ವೆ ಸಂಚಾರಕ್ಕೂ ಅಡೆತಡೆ:
ರಸ್ತೆ ಮಾರ್ಗ ಮಾತ್ರವಲ್ಲದೆ, ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗಕ್ಕೂ ಮಳೆಯ ಪ್ರಕೋಪದಿಂದ ಭಾರಿ ಹಾನಿಯಾಗಿದೆ. ಸಕಲೇಶಪುರದ ಎಡಕುಮೇರಿ ಬಳಿ ರೈಲ್ವೆ ಹಳಿಗಳ ಮೇಲೆ ಮಣ್ಣು ಮತ್ತು ಬಂಡೆಗಳು ಕುಸಿದು ಬಿದ್ದಿವೆ. ಸುಮಾರು 7 ಕಿಲೋಮೀಟರ್ ಪ್ರದೇಶದಲ್ಲಿ, ಒಟ್ಟು 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಕಾರಣದಿಂದ ಈ ಮಾರ್ಗದಲ್ಲಿ ಓಡಾಡುವ ಎಲ್ಲಾ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ರೈಲ್ವೆ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಹಳಿಗಳ ಮೇಲಿಂದ ಮಣ್ಣನ್ನು ತೆರವುಗೊಳಿಸಿ, ಸಂಚಾರವನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಹಾನಿಯ ಪ್ರಮಾಣ ಹೆಚ್ಚಿರುವುದರಿಂದ ಈ ಕಾರ್ಯಕ್ಕೆ ಸಾಕಷ್ಟು ಸಮಯ ಹಿಡಿಯುವ ಸಾಧ್ಯತೆ ಇದೆ. ಈ ಘಟನೆಯಿಂದಾಗಿ ಮಂಗಳೂರು ಮತ್ತು ಬೆಂಗಳೂರಿನ ನಡುವಿನ ಸಂಪರ್ಕವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.