
ಬೆಂಗಳೂರು : ರಾಜಕೀಯ ಮುಖಂಡ ಕೆಜಿಎಫ್ ಬಾಬು ಅವರ ಮನೆಗೆ ಇಂದು ಬೆಳ್ಳಂಬೆಳಗ್ಗೆ R.T.O ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಐಷಾರಾಮಿ ಕಾರುಗಳ ತೆರಿಗೆ ಪಾವತಿ ಕುರಿತು ಪರಿಶೀಲನೆ ನಡೆಸಲು ಈ ದಾಳಿ ನಡೆಸಲಾಗಿದೆ. ರೋಲ್ಸ್ ರಾಯ್, ವೆಲ್ಫೇರ್ ಸೇರಿದಂತೆ ಹಲವು ದುಬಾರಿ ವಾಹನಗಳನ್ನು ಹೊಂದಿರುವ ಬಾಬು ಅವರು ತೆರಿಗೆ ಕಟ್ಟಿಲ್ಲ ಎಂಬ ಆರೋಪದ ಮೇಲೆ ಅಧಿಕಾರಿಗಳು ಕಾರುಗಳನ್ನು ಜಪ್ತಿ ಮಾಡಲು ಮುಂದಾಗಿದ್ದಾರೆ.
ಆರ್ಟಿಓ ಜಂಟಿ ಆಯುಕ್ತರಾದ ಶೋಭಾ ಅವರ ನೇತೃತ್ವದ ತಂಡವು, ಕೆಜಿಎಫ್ ಬಾಬು ಅವರ ಕಾರುಗಳ ಸಂಪೂರ್ಣ ಪಟ್ಟಿಯೊಂದಿಗೆ ಅವರ ಮನೆಗೆ ಆಗಮಿಸಿತ್ತು. ಬೇರೆ ರಾಜ್ಯಗಳಲ್ಲಿ ನೋಂದಣಿಯಾಗಿರುವ ಐಷಾರಾಮಿ ಕಾರುಗಳ ತೆರಿಗೆ ಪಾವತಿ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳು ಮುಂದಾದರು.
ಆದರೆ, ಆರ್ಟಿಓ ಅಧಿಕಾರಿಗಳು ಬಂದಾಗ ಕೆಜಿಎಫ್ ಬಾಬು ಗೇಟ್ ತೆರೆಯಲು ನಿರಾಕರಿಸಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಸಾಕಷ್ಟು ಸಮಯ ಕಾಯಬೇಕಾಯಿತು. ನಂತರ, ಆರ್ಟಿಓ ಅಧಿಕಾರಿಗಳು ಹೈ ಗ್ರೌಂಡ್ ಹೊಯ್ಸಳ ಪೊಲೀಸರನ್ನು ಕರೆಸಿ, ಅವರ ಮೂಲಕ ಗೇಟ್ ತೆರೆಯಲು ಸೆಕ್ಯೂರಿಟಿ ಜೊತೆ ಮಾತುಕತೆ ನಡೆಸಿ, ಒಳಗೆ ಪ್ರವೇಶಿಸಿದರು.
ಕೆಜಿಎಫ್ ಬಾಬು ಅವರು MH 11 AX 1 ನೋಂದಣಿಯ ರೋಲ್ಸ್ ರಾಯ್ ಮತ್ತು MH 02 BB 2 ನೋಂದಣಿಯ ರೋಲ್ಸ್ ರಾಯ್ ಕಾರುಗಳನ್ನು ಹೊಂದಿದ್ದಾರೆ. ಇದಲ್ಲದೆ, ಅವರು ತಮ್ಮ ಮೊಮ್ಮಗಳಿಗಾಗಿ ವೆಲ್ಫೇರ್ ಕಾರ್ ಖರೀದಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, MH 02 BB 2 ನೋಂದಣಿಯ ರೋಲ್ಸ್ ರಾಯ್ ಕಾರನ್ನು ನಟ ಅಮೀರ್ ಖಾನ್ ಅವರಿಂದ ಒಂದು ವರ್ಷ ಬಳಸಿದ ನಂತರ ಖರೀದಿಸಿದ್ದರೆ, MH 11 AX 1 ನೋಂದಣಿಯ ರೋಲ್ಸ್ ರಾಯ್ ಕಾರನ್ನು ಅಮಿತಾಭ್ ಬಚ್ಚನ್ ಅವರಿಂದ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಸೆಲೆಬ್ರಿಟಿಗಳು ಬಳಸಿದ ಕಾರುಗಳ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತೆಂದು ಹೇಳಲಾಗುತ್ತಿದೆ.
ಬಾಬು ಅವರ ಮನೆಯ ಪಾರ್ಕಿಂಗ್‌ನಲ್ಲಿ ಒಟ್ಟು ನಾಲ್ಕು ಐಷಾರಾಮಿ ಕಾರುಗಳಿವೆ. ಅಧಿಕಾರಿಗಳು ಪ್ರತಿಯೊಂದು ಕಾರಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಯಾವಾಗ ಮತ್ತು ಯಾರಿಂದ ಖರೀದಿಸಲಾಯಿತು, ಯಾವ ರಾಜ್ಯದಲ್ಲಿ ನೋಂದಣಿಯಾಗಿದೆ ಮತ್ತು ತೆರಿಗೆಗಳನ್ನು ಪಾವತಿಸಲಾಗಿದೆಯೇ ಎಂಬ ಬಗ್ಗೆ ಕೆಜಿಎಫ್ ಬಾಬು ಅವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಧಿಕಾರಿಗಳು ಕೇಳಿದ ಎಲ್ಲಾ ವಿವರಗಳು ಮತ್ತು ದಾಖಲೆಗಳನ್ನು ಕೆಜಿಎಫ್ ಬಾಬು ಒದಗಿಸುತ್ತಿದ್ದು, ಕಾರುಗಳ ವಿಮೆ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ.