
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಸಮೀಪ ನಾಲ್ಕು ತಿಂಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ 134 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅಪೂರ್ವ ಭಟ್ (30) ಅವರು ಮಂಗಳವಾರ (ಅಕ್ಟೋಬರ್ 7) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪತಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಅಪಘಾತದ ವಿವರ
ಖಾಸಗಿ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ ಪರಿಣಾಮವಾಗಿ ಅಂಡೆಪುಣಿ ಈಶ್ವರ ಭಟ್ ಮತ್ತು ಅವರ ಪುತ್ರಿ ಅಪೂರ್ವ ಭಟ್ (30) ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈಶ್ವರ ಭಟ್ ಅವರ ಮೊಮ್ಮಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಗಂಭೀರ ಗಾಯಗೊಂಡಿದ್ದ ಈಶ್ವರ ಭಟ್ ಅವರು ಚೇತರಿಸಿಕೊಂಡಿದ್ದರೂ, ಅಪೂರ್ವ ಅವರ ಆರೋಗ್ಯ ಸ್ಥಿತಿ ಮಾತ್ರ ಗಂಭೀರವಾಗಿತ್ತು.
ಫಲಿಸದ ಪತಿಯ ನಿರಂತರ ಪ್ರಾರ್ಥನೆ
ಪತ್ನಿ ಅಪೂರ್ವ ಭಟ್ ಅವರ ಚೇತರಿಕೆಗಾಗಿ ಅವರ ಪತಿ ಆಶಿಶ್ ಸಾರಡ್ಕ ಅವರು ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಪ್ರಾರ್ಥಿಸುತ್ತಿದ್ದರು. ಪತ್ನಿಯ ಚಿಕಿತ್ಸೆಗಾಗಿ ಅವರು ಬೆಂಗಳೂರಿನಿಂದ ಮಂಗಳೂರಿಗೆ ತಮ್ಮ ಮನೆಯನ್ನೇ ಶಿಫ್ಟ್ ಮಾಡಿದ್ದರು.
ಆಶಿಶ್ ಅವರು ಪ್ರತಿದಿನವೂ “ತಾಯಿ ಪ್ರೀತಿಗೋಸ್ಕರ ಹಂಬಲಿಸುತ್ತಿರುವ ಮಗಳಿಗಾಗಿ ಪ್ರಾರ್ಥಿಸಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಅವರ ಈ ನಿರಂತರ ಪ್ರಾರ್ಥನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಆದರೆ, ಎಲ್ಲಾ ಪ್ರಾರ್ಥನೆಗಳು ವಿಫಲವಾಗಿದ್ದು, ಅಪೂರ್ವ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕಂಬನಿ ಮಿಡಿದಿದ್ದಾರೆ.



































