
ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಇತ್ತೀಚಿನ ಸೋಶಿಯಲ್ ಮೀಡಿಯಾ ಪೋಸ್ಟ್ ಮತ್ತು ನಡೆಗಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ. ಯುಗಾದಿ ಹಬ್ಬದ ದಿನದಂದು ಬಿಳಿ ಬೋರ್ಡ್ ಮೇಲೆ “ಅಧ್ಯಾಯ 2, ಇಲ್ಲಿಂದ ಶುರು” ಎಂದು ಬರೆದಿರುವ ಫೋಟೋ ಹಂಚಿಕೊಂಡಿರುವ ರಿಷಬ್, ಇದು ‘ಕಾಂತಾರ-2’ ಸಿನಿಮಾ ಕುರಿತಾದ ಮುನ್ಸೂಚನೆಯೇ ಎಂಬ ಚರ್ಚೆಗೆ ಗ್ರಾಸವಾಗಿದ್ದಾರೆ.
ವಿಶೇಷವೆಂದರೆ, ಈ ಪೋಸ್ಟ್‌ನಲ್ಲಿ ‘ರಿಷಬ್ ಶೆಟ್ಟಿ ಫಿಲಂಸ್’ ಬ್ಯಾನರ್‌ನ ಸುಳಿವು ನೀಡಲಾಗಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಪ್ರಸ್ತುತ ಅವರು ‘ಜೈ ಹನುಮಾನ್’ ಚಿತ್ರದ ಮುಹೂರ್ತ ಮುಗಿಸಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ‘ಹೊಂಬಾಳೆ ಫಿಲಂಸ್’ ಅಧಿಕೃತ ಖಾತೆಯನ್ನು ಅನ್‌ಫಾಲೋ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೊಂಬಾಳೆ ಫಿಲಂಸ್ ಮುಖ್ಯಸ್ಥ ವಿಜಯ ಕಿರಗಂದೂರು ಅವರನ್ನು ರಿಷಬ್ ಇಂದಿಗೂ ಫಾಲೋ ಮಾಡುತ್ತಿದ್ದರೂ, ಸಂಸ್ಥೆಯ ಖಾತೆಯನ್ನು ಅನ್‌ಫಾಲೋ ಮಾಡಿರುವುದು ಕಾಂತಾರ ಸೀಕ್ವೆಲ್ ನಿರ್ಮಾಣದ ಜವಾಬ್ದಾರಿಯಲ್ಲಿ ಏನಾದರೂ ಬದಲಾವಣೆಗಳಾಗಿದೆಯೇ ಅಥವಾ ಸ್ವತಂತ್ರವಾಗಿ ಸಿನಿಮಾ ನಿರ್ಮಿಸಲಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂದಿನ 2 ವರ್ಷಗಳ ನಂತರ ಈ ಹೊಸ ಅಧ್ಯಾಯ ಅಧಿಕೃತವಾಗಿ ಸೆಟ್ಟೇರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.



































