
ಬೆಂಗಳೂರು : 2003ರ ಸಾಫ್ಟ್‌ವೇರ್ ಇಂಜಿನಿಯರ್ ಬಿ.ವಿ. ಗಿರೀಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿ ನಾಲ್ವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಖಾಯಂ ಮಾಡಿದೆ. ಅದೇ ವೇಳೆ, ಆರೋಪಿಗಳು ಮುಂದಿನ 8 ವಾರಗಳಲ್ಲಿ ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಈ ಪ್ರಕರಣದಲ್ಲಿ 2010ರಲ್ಲಿ ಅಧೀನ ನ್ಯಾಯಾಲಯ ಮತ್ತು 2011ರಲ್ಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ, ಆರೋಪಿಗಳಾದ ಡಿ. ಅರುಣ್ ವರ್ಮಾ (ಎ1), ಎ. ವೆಂಕಟೇಶ್ (ಎ2), ದಿನೇಶ್ (ಎ3), ಮತ್ತು ಶುಭಾ (ಎ2) ಸುಪ್ರೀಂ ಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರಿದ್ದ ವಿಭಾಗೀಯ ಪೀಠವು ಈ ನಾಲ್ವರ ಕ್ರಿಮಿನಲ್ ಮೇಲ್ಮನವಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಶುಭಾ ಮತ್ತು ಇತರ ಮೂವರು ಆರೋಪಿಗಳು ಸಂಚು ಮಾಡಿ ಗಿರೀಶ್ ಕೊಲೆ ಮಾಡಿರುವುದು ಎಲ್ಲಾ ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುವುದರಿಂದ ಹೈಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
2003ರಲ್ಲಿ ಈ ಕೃತ್ಯ ನಡೆದಾಗ ಎಲ್ಲಾ ನಾಲ್ವರು ಆರೋಪಿಗಳು ಯುವಕರಾಗಿದ್ದರು. ಮೃತ ಗಿರೀಶ್‌ನನ್ನು ಮದುವೆಯಾಗಲು ಶುಭಾಗೆ ಇಷ್ಟವಿರಲಿಲ್ಲ. ತಿಳುವಳಿಕೆಯ ಕೊರತೆಯಿಂದ ಈ ಕೊಲೆ ನಡೆದಿದೆ ಎಂದು ನ್ಯಾಯಾಲಯ ಗಮನಿಸಿದೆ. ಎರಡು ದಶಕಗಳೇ ಕಳೆದಿದ್ದು, ಮೂರನೇ ಆರೋಪಿ ದಿನೇಶ್‌ಗೆ ಈಗ 28 ವರ್ಷ ವಯಸ್ಸಾಗಿದ್ದು, ಇತ್ತೀಚೆಗೆ ಮದುವೆಯಾಗಿ ಮಗುವಿದೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಆರೋಪಿಗಳು ಸನ್ನಡತೆ ತೋರಿದ್ದಾರೆ ಎಂದೂ ನ್ಯಾಯಾಲಯ ತಿಳಿಸಿದೆ. ಅವರೆಲ್ಲ ಹುಟ್ಟಿನಿಂದ ಕ್ರಿಮಿನಲ್‌ಗಳಲ್ಲ; ಬದಲಿಗೆ ಜೀವನದಲ್ಲಿ ತೆಗೆದುಕೊಂಡ ಒಂದು ಕೆಟ್ಟ ನಿರ್ಧಾರ ಅವರನ್ನು ಈ ಪರಿಸ್ಥಿತಿಗೆ ತಳ್ಳಿದೆ ಎಂದು ನ್ಯಾಯಪೀಠ ಹೇಳಿದೆ.
ಆರೋಪಿಗಳು ಈಗ ಮಧ್ಯವಯಸ್ಕರಾಗಿದ್ದು, ಅವರಿಗೆ ಹೊಸ ಜೀವನ ಆರಂಭಿಸಲು ಒಂದು ಅವಕಾಶ ಕಲ್ಪಿಸುವ ಉದ್ದೇಶದಿಂದ, ಮುಂದಿನ 8 ವಾರಗಳಲ್ಲಿ ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ರಾಜ್ಯಪಾಲರು ಈ ಮನವಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರಾಜ್ಯಪಾಲರು ಕ್ಷಮಾದಾನದ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಜಾಮೀನಿನ ಮೇಲೆ ಇರುವ ಆರೋಪಿಗಳನ್ನು ಬಂಧಿಸಬಾರದು ಎಂದು ಪೊಲೀಸರಿಗೆ ನ್ಯಾಯಪೀಠ ನಿರ್ದೇಶಿಸಿದೆ.