
ಹಿರಿಯಡ್ಕ : ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್), ಹಿರಿಯಡ್ಕದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಶ್ರೀ ದಾಮೋದರ ಶರ್ಮ ಬಾರ್ಕೂರುರವರು ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಸಕಾರಾತ್ಮಕ ಆಲೋಚನೆಯೊಂದಿಗೆ ಜೀವನ ನಡೆಸಬೇಕು. ತಂದೆ ತಾಯಿ ವಿದ್ಯೆ ಕಲಿಸಿದ ಗುರುಗಳನ್ನು ಗೌರವದಿಂದ ಕಾಣಬೇಕು. ಬದುಕಿನ ಸುಖ ಇರುವುದು ಇತರರನ್ನು ಗೌರವಿಸುವುದರಲ್ಲಿ ಮಾತ್ರ. ಹದಿಹರೆಯದ ವಯಸ್ಸು, ಮನಸ್ಸಿನ ಹುಚ್ಚು, ಬದುಕಿನ ಸತ್ಯವಲ್ಲ . ದಾರಿ ತಪ್ಪಬೇಡಿ ಬದುಕಿನಲ್ಲಿ ಆರ್ಥಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ. ಆತ್ಮವಿಶ್ವಾಸದಿಂದ ಸುಂದರ ಬದುಕನ್ನು ಕಟ್ಟಿಕೊಳ್ಳಿ ಎಂದು ಕಿವಿ ಮಾತನ್ನು ಹೇಳಿದರು.

ಈ ಕಾರ್ಯಕ್ರಮದಲ್ಲಿ ದಾನಿಗಳ ಸಹಕಾರದೊಂದಿಗೆ ಅತಿಥಿ ಉಪನ್ಯಾಸಕರು, ಗೌರವ ಶಿಕ್ಷಕರು, ಕಛೇರಿ ಹಾಗೂ ಅಡುಗೆ ಸಿಬ್ಬಂದಿಗಳು ಸೇರಿ 48 ಜನರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರು ನಡೆಸಿದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾದ ಕುಮಾರ್ ಅಮೋಘ, ತಾಲೂಕು ಮಟ್ಟದ ಕೋ ಕೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಬಾಲಕ – ಬಾಲಕಿಯರ ತಂಡಗಳನ್ನು ಹಾಗೂ ಅಮೆಚೂರ್ ಅಥ್ಲೆಟಿಕ್ ಮೀಟ್ ನಲ್ಲಿ ರಾಜ್ಯ ಮಟ್ಟದಲ್ಲಿ ಎತ್ತರ ಜಿಗಿತ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು, ದಕ್ಷಿಣ ಭಾರತ ಅಮೆಚೂರ್ ಅಥ್ಲೆಟಿಕ್ ಮೀಟ್ ನಲ್ಲಿ ಪಾಲ್ಗೊಳ್ಳುವ ಕುಮಾರ್ ರೋಹಿತ್ ಕುಮಾರ್ ನನ್ನು ಅಭಿನಂದಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯ ಶೈಕ್ಷಣಿಕ ಪರಂಪರೆ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಈ ಕಾರ್ಯಕ್ರಮಕ್ಕೆ ಸಹಕಾರವಿತ್ತ ದಾನಿಗಳಾದ ಬಿ ರಮಾನಂದ ರಾವ್ ಮುಂಬೈ, ಹರ್ಷ ಎಂಟರ್ಪ್ರೈಸಸ್ ಉಡುಪಿ , ಹಳೆ ವಿದ್ಯಾರ್ಥಿ ಸಂಘ ಹಿರಿಯಡ್ಕ (ರಿ) ಮತ್ತು ಅಮೃತ ಮಹೋತ್ಸವ ಸಮಿತಿ ಇವರುಗಳನ್ನು ಪ್ರಾಂಶುಪಾಲರು ಅಭಿನಂದಿಸಿದರು.

ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ರಾವ್ ಮಾತನಾಡಿ ಇದೇ ಬರುವ ಅಕ್ಟೋಬರ್ 19ರಂದು ಅಮೃತ ಮಹೋತ್ಸವದ ಪ್ರಯುಕ್ತ ಹಳೆ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿಗಳಾದ ನಾಗರಾಜೇಂದ್ರ ಮಾತನಾಡಿ 2026ರ ಜನವರಿ 1, 2 ಮತ್ತು 3 ರಂದು ನಡೆಯಲಿರುವ ಸಂಸ್ಥೆಯ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲರ ಸಹಕಾರವನ್ನು ಕೋರಿದರು.

ಎಸ್.ಡಿ.ಎಂ.ಸಿ ಸಂಚಾಲಕರಾದ ಡಾ.ಎನ್.ಎಸ್.ಶೆಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀ ಬಿ.ಎಲ್.ವಿಶ್ವಾಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ರೇವತಿ, ಎಸ್ ಡಿ ಎಂ ಸಿ ಸದಸ್ಯರು , ಹಳೇ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಗಣ್ಯರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಗೀತಾ ಕುಮಾರಿ ಸ್ವಾಗತಿಸಿ ಹಿರಿಯ ಅಧ್ಯಾಪಕರಾದ ವಿಜಯಕುಮಾರ್ ವಂದಿಸಿದರು. ಉಪನ್ಯಾಸಕ ದೇವದಾಸ್ ಬಿ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.