
ಬೆಂಗಳೂರು: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಇತರ ಪ್ರಭಾವಿ ನಾಯಕರ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡು, ಶ್ರೀಮಂತ ಕುಟುಂಬದ ಸುಮಾರು 20 ಮಹಿಳೆಯರಿಗೆ 30 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿರುವ ಪ್ರಕರಣ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಮುಖ ಆರೋಪಿ ಸವಿತಾ ಮತ್ತು ಆಕೆಯ ಪರಿಚಯಸ್ಥ ಪುನೀತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಹೆಚ್‌ವಿಕೆ ಗಾರ್ಡನ್ ನಿವಾಸಿ ಸವಿತಾ, ಕಿಟ್ಟಿ ಪಾರ್ಟಿಗಳಲ್ಲಿ ಪರಿಚಯವಾದ ಶ್ರೀಮಂತ ಸ್ನೇಹಿತೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಹಾಗೂ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರ ಹೆಸರುಗಳನ್ನು ಬಳಸಿಕೊಂಡು ವಂಚನೆ ಎಸಗಿದ್ದಾಳೆ.
ವಿದೇಶದಿಂದ ಕಡಿಮೆ ಬೆಲೆಗೆ ಚಿನ್ನ ತರಿಸುವ ಆಮಿಷವೊಡ್ಡಿ, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಸವಿತಾ ಶ್ರೀಮಂತ ಕುಟುಂಬದ ಮಹಿಳೆಯರ ಮನವೊಲಿಸಿ ಮೋಸ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಸವಿತಾ ವಿರುದ್ಧ ಈ ಹಿಂದೆಯೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ 85 ಲಕ್ಷ ರೂಪಾಯಿ ಹಾಗೂ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ 2.50 ಕೋಟಿ ರೂಪಾಯಿ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಪ್ರಸ್ತುತ ತನಿಖೆಯಲ್ಲಿ ವಂಚನೆಯ ಮೊತ್ತ ಅಂದಾಜು 30 ಕೋಟಿ ರೂಪಾಯಿ ದಾಟಿದೆ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಪೂರ್ಣಗೊಂಡ ನಂತರ ನಿಖರ ಮೊತ್ತ ತಿಳಿಯಲಿದೆ ಎಂದು ಹೇಳಿದ್ದಾರೆ.