
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ (RBI) ಲಕ್ಷಾಂತರ ರೂಪಾಯಿ ಮೌಲ್ಯದ ನಾಣ್ಯಗಳನ್ನು ರಾಯಚೂರಿಗೆ ಸಾಗಿಸುತ್ತಿದ್ದ ಲಾರಿಯೊಂದು ನೆಲಮಂಗಲ ತಾಲೂಕಿನ ರಾಯರಪಾಳ್ಯ ಗೇಟ್ ಬಳಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಲಾರಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಲಾರಿ ಅಪ್ಪಳಿಸಿದ ಸ್ಥಳದಲ್ಲಿ ಲಕ್ಷಾಂತರ ಮೌಲ್ಯದ ನಾಣ್ಯಗಳು ರಸ್ತೆಯ ಬದಿಗೆ ಬಿದ್ದಿದ್ದರೂ, ಲಾರಿಯನ್ನು ಭದ್ರವಾಗಿ ಮುಚ್ಚಿದ್ದರಿಂದ ಒಳಾಂಗಣದಲ್ಲಿದ್ದ ನಾಣ್ಯಗಳು ಹೊರಗೆ ಚೆಲ್ಲಲಿಲ್ಲ. ಬೆಂಗಳೂರಿನ ಆರ್‌ಬಿಐ ಶಾಖೆಯಿಂದ ₹1 ಮತ್ತು ₹2 ಮುಖಬೆಲೆಯ ₹57 ಲಕ್ಷ ಮೌಲ್ಯದ ನಾಣ್ಯಗಳು ಲಾರಿಯಲ್ಲಿ ಲೋಡ್ ಆಗಿದ್ದವು. ನಾಣ್ಯಗಳನ್ನು ಮೂಟೆಗಳಲ್ಲಿ ಡಬಲ್ ಪ್ಯಾಕಿಂಗ್ ಮಾಡಲಾಗಿದ್ದರಿಂದ ಯಾವುದೇ ನಾಣ್ಯಗಳು ಸೋರಿಕೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಅಪಘಾತದ ಮಾಹಿತಿ ದೊರೆತ ತಕ್ಷಣವೇ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಕ್ರೇನ್ ಸಹಾಯದಿಂದ ಲಾರಿಯನ್ನು ಯಶಸ್ವಿಯಾಗಿ ಮೇಲಕ್ಕೆ ಎತ್ತಿದರು. ಪ್ರಸ್ತುತ, ಲಾರಿಯಲ್ಲಿದ್ದ ನಾಣ್ಯಗಳು ಸುರಕ್ಷಿತವಾಗಿವೆಯೇ ಅಥವಾ ನಷ್ಟವಾಗಿದೆಯೇ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ, ರಾತ್ರಿ ವೇಳೆಯೇ ಬ್ಯಾಂಕಿನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಎಲ್ಲಾ ನಾಣ್ಯಗಳನ್ನು ಮತ್ತೊಂದು ಲಾರಿಗೆ ವರ್ಗಾಯಿಸಿಕೊಂಡು ಭದ್ರತಾ ವ್ಯವಸ್ಥೆಯಲ್ಲಿ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ.