
ಉಡುಪಿ : ಕಲ್ಯಾಣಪುರದ ಮೀನು ಮಾರುಕಟ್ಟೆ ಬಳಿ ಕಳೆದ ಮೂರು-ನಾಲ್ಕು ದಿನಗಳಿಂದ ಮಳೆಗಾಳಿಗೆ ಅಸಹಾಯಕರಾಗಿ ತೊಂದರೆಯಲ್ಲಿದ್ದ ವೃದ್ಧರೊಬ್ಬರನ್ನು ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ಕೊಳಲಗಿರಿಯಲ್ಲಿರುವ ‘ಸ್ವರ್ಗ ಆಶ್ರಮ’ಕ್ಕೆ ದಾಖಲಿಸಿದ್ದಾರೆ.
ವೃದ್ಧರು ತಮ್ಮ ಹೆಸರು ಲಕ್ಷ್ಮಣ ಪೂಜಾರಿ ಎಂದು ಹೇಳಿಕೊಂಡಿದ್ದು, ತಮ್ಮ ಮಕ್ಕಳು ಬರುವ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಅವರಿಗೆ ಮರೆವಿನ ಕಾಯಿಲೆ (ಡಿಮೆನ್ಷಿಯಾ) ಇರುವಂತೆ ಕಾಣುತ್ತದೆ. ಮೀನು ಮಾರಾಟ ಮಾಡುವ ಮಹಿಳೆಯೊಬ್ಬರಿಂದ ಮಾಹಿತಿ ಪಡೆದ ವಿಶು ಶೆಟ್ಟಿಯವರು ತಕ್ಷಣವೇ ಸ್ಪಂದಿಸಿ, ವೃದ್ಧರನ್ನು ರಕ್ಷಿಸಿ ಆಶ್ರಮಕ್ಕೆ ಸೇರಿಸಿದ್ದಾರೆ.
ಈ ಬಗ್ಗೆ ನಗರ ಠಾಣೆಗೆ ಮಾಹಿತಿ ನೀಡಲಾಗಿದೆ. ವೃದ್ಧರ ಸಂಬಂಧಿಕರು ಯಾರಾದರೂ ಇದ್ದಲ್ಲಿ, ಕೊಳಲಗಿರಿಯ ‘ಸ್ವರ್ಗ ಆಶ್ರಮ’ವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.