
ಚಿತ್ರದುರ್ಗದಲ್ಲಿ ಹತ್ಯೆಯಾದ ರೇಣುಕಸ್ವಾಮಿ ಅವರ ಕುಟುಂಬಸ್ಥರು ಗೋಕರ್ಣಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ರೇಣುಕಸ್ವಾಮಿ ತಂದೆ ಕಾಶಿನಾಥ ಗೌಡ, ಪತ್ನಿ, ಸೊಸೆ ಹಾಗೂ ಮೊಮ್ಮಗ ದೇವರ ದರ್ಶನ ಪಡೆದು ಮಗನಿಗೆ ಮೋಕ್ಷ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ನಂತರ ಮಾತನಾಡಿದ ಕಾಶಿನಾಥ ಗೌಡ, “ನನ್ನ ಮಗನಿಗೆ ಆಗಿರುವ ದುಃಖದ ಘಟನೆ ಮತ್ತೊಬ್ಬರಿಗಾಗಬಾರದು. ಹತ್ಯೆಯ ಆರೋಪಿಗಳೆಲ್ಲರೂ ಶಿಕ್ಷೆಗೆ ಗುರಿಯಾಗಬೇಕು. ನನ್ನ ಸೊಸೆಗೆ ಸರ್ಕಾರಿ ಉದ್ಯೋಗ ನೀಡಬೇಕು” ಎಂದು ಕಣ್ಣೀರು ಹಾಕಿದರು.
ಇದೇ ಸಂದರ್ಭದಲ್ಲೇ ನಟ ದರ್ಶನ್ ಕೂಡಾ ಗೌಪ್ಯವಾಗಿ ಗೋಕರ್ಣಕ್ಕೆ ಆಗಮಿಸಿ ಅರ್ಚಕರೊಬ್ಬರ ಮನೆಯಲ್ಲಿ ಹೋಮ-ಯಜ್ಞ ಮಾಡಿಸಿರುವುದು ಬೆಳಕಿಗೆ ಬಂದಿದೆ. ಜಾಮೀನು ಮುಂದುವರೆಯಲು ಹಾಗೂ ಪ್ರಕರಣದಿಂದ ಪಾರಾಗಲು ದರ್ಶನ್ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.