
ಉಡುಪಿ: ನಾಗರಿಕರ ಜನನ ಮತ್ತು ಮರಣ ದಾಖಲೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬುಧವಾರ ಮಣಿಪಾಲದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಪ್ರತಿಯೊಬ್ಬ ನಾಗರಿಕನ ಜನನ, ಮರಣ ಮತ್ತು ನಿರ್ಜೀವ ಜನನಗಳನ್ನು ಕಡ್ಡಾಯವಾಗಿ ಶೇ. 100ರಷ್ಟು ನೋಂದಣಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜನನ ಅಥವಾ ಮರಣ ಸಂಭವಿಸಿದ 21 ದಿನದೊಳಗೆ ಯಾವುದೇ ಶುಲ್ಕವಿಲ್ಲದೆ ನೋಂದಣಿ ಮಾಡಬಹುದು. 21 ದಿನದ ನಂತರ 30 ದಿನಗಳೊಳಗಾಗಿ ₹20, ಹಾಗೂ ಒಂದು ವರ್ಷದೊಳಗಾಗಿ ₹50 ಶುಲ್ಕದೊಂದಿಗೆ ನೋಂದಣಿ ಮಾಡಲು ಅವಕಾಶವಿದೆ. ಒಂದು ವರ್ಷದ ನಂತರ ವಿಳಂಬ ನೋಂದಣಿಗೆ ನ್ಯಾಯಾಲಯದ ಆದೇಶ ಅಗತ್ಯವಿದೆ.
ತಪ್ಪು ಮಾಹಿತಿ ನೀಡಿ ದಾಖಲೆಗಳನ್ನು ನಮೂದಿಸುವವರ ಮೇಲೆ ದಂಡ ವಿಧಿಸಲಾಗುವುದು. ವಿದೇಶದಲ್ಲಿ ಜನಿಸಿದ ಭಾರತೀಯ ಪೋಷಕರ ಮಗುವನ್ನು ಭಾರತಕ್ಕೆ ಬಂದ 60 ದಿನದೊಳಗೆ ನೋಂದಣಿ ಮಾಡಿಸಬೇಕು. ದಾಖಲೆಗಳಲ್ಲಿ ಲಿಪಿಕ ಅಥವಾ ಔಪಚಾರಿಕ ತಪ್ಪುಗಳನ್ನು ಮಾತ್ರ ತಿದ್ದುಪಡಿ ಮಾಡಲು ಅವಕಾಶವಿದೆ. 2015ರಿಂದ ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಕಾರ್ಯ ಕಡ್ಡಾಯವಾಗಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಇದನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾರ್ವಜನಿಕರಿಗೆ ಜನನ-ಮರಣ ಪ್ರಮಾಣಪತ್ರಗಳನ್ನು ಸಕಾಲ ವ್ಯಾಪ್ತಿಯಲ್ಲಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ಜನನ ಘಟನೆಗಳು 6,199 ಮತ್ತು ಮರಣ ಘಟನೆಗಳು 7,031 ನೋಂದಣಿಯಾಗಿವೆ. ಜಿಲ್ಲೆಯ ಲಿಂಗಾನುಪಾತವು ಪ್ರತಿ 1000 ಗಂಡು ಮಕ್ಕಳಿಗೆ 1004 ಹೆಣ್ಣು ಮಕ್ಕಳಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.