
ಭುವನೇಶ್ವರ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಹುಚ್ಚು ರೀಲ್ಸ್‌ಗಳಿಗಾಗಿ ಯುವಕರು ತಮ್ಮ ಜೀವವನ್ನು ಪಣಕ್ಕಿಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹದ್ದೇ ಒಂದು ಘಟನೆಯಲ್ಲಿ, ಒಡಿಶಾದ ಪುರುನಪಾಣಿ ನಿಲ್ದಾಣದ ಬಳಿಯ ದಾಲುಪಲಿ ಪ್ರದೇಶದಲ್ಲಿ ಮೂವರು ಬಾಲಕರು ಅಪಾಯಕಾರಿ ರೀಲ್ಸ್ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.
ಅತಿ ವೇಗದಲ್ಲಿ ಹಾದುಹೋಗುತ್ತಿದ್ದ ರೈಲಿನ ಹಳಿಯ ಮೇಲೆ ಒಬ್ಬ ಬಾಲಕ ಮಲಗಿಕೊಂಡಿದ್ದಾನೆ. ಈ ಭೀಕರ ದೃಶ್ಯವನ್ನು ಆತನ ಇಬ್ಬರು ಸ್ನೇಹಿತರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ರೈಲು ಹೋದ ನಂತರ ಮೂವರೂ ಖುಷಿಯಿಂದ ಕುಣಿದಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೂವರನ್ನೂ ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಇಂತಹ ಅಜಾಗರೂಕ ಕೃತ್ಯಗಳು ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತವೆ ಮತ್ತು ಕಾನೂನುಗಳನ್ನು ಉಲ್ಲಂಘಿಸುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ರೈಲು ಹಳಿಗಳ ಮೇಲೆ ಇಂತಹ ಸಾಹಸಗಳನ್ನು ಮಾಡದಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಅಲ್ಲದೆ, ಪೋಷಕರು ತಮ್ಮ ಮಕ್ಕಳ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕೆಂದು ಕರೆ ನೀಡಿದ್ದಾರೆ.
“ರೀಲ್ ವೈರಲ್ ಆಗುತ್ತದೆ ಎಂಬ ನಿಟ್ಟಿನಲ್ಲಿ ಸ್ನೇಹಿತರು ಈ ರೀತಿ ಐಡಿಯಾ ಮಾಡಿದರು” ಎಂದು ಹಳಿಯ ಮೇಲೆ ಮಲಗಿದ್ದ ಬಾಲಕ ಹೇಳಿದ್ದಾನೆ. “ನಾನು ಹಳಿಗಳ ಮೇಲೆ ಮಲಗಿದಾಗ, ರೈಲು ಹಾದು ಹೋದಾಗ, ನನ್ನ ಹೃದಯ ಜೋರಾಗಿ ಬಡಿಯುತ್ತಿತ್ತು. ನಾನು ಬದುಕುಳಿಯುತ್ತೇನೆಂದು ನಿರೀಕ್ಷಿಸಿರಲಿಲ್ಲ,” ಎಂದು ಬಾಲಕ ತಿಳಿಸಿದ್ದಾನೆ.