
ನವದೆಹಲಿ: ಬಳಸಿ ಬಿಸಾಡಬೇಕಾದ (ಯೂಸ್ ಅಂಡ್ ಥ್ರೋ) ಪೇಪರ್ ಬಾಕ್ಸ್‌ಗಳನ್ನು ರೈಲಿನ ಸಿಬ್ಬಂದಿ ತೊಳೆದು ಮರುಬಳಕೆ ಮಾಡುತ್ತಿದ್ದಾರೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಈರೋಡ್-ಜೋಗ್ಬಾನಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16601) ರೈಲಿನಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋದಲ್ಲಿ, ಅಡುಗೆ ಸಿಬ್ಬಂದಿ ಪ್ರಯಾಣಿಕರು ಬಳಸಿ ಬಿಸಾಕಿರುವ ಆಹಾರದ ಪೊಟ್ಟಣಗಳನ್ನು ತೊಳೆದು ಸಂಗ್ರಹಿಸಿಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ರೈಲು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿವಿ ಅವರೂ ಈ ವಿಡಿಯೋವನ್ನು ಹಂಚಿಕೊಂಡು, ರೈಲಿನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಭಾರತೀಯ ರೈಲ್ವೆಯ ಸ್ಪಷ್ಟೀಕರಣ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕುರಿತು ತಕ್ಷಣವೇ ಭಾರತೀಯ ರೈಲ್ವೆ ಸ್ಪಷ್ಟೀಕರಣ ನೀಡಿದೆ.
“ರೈಲಿನಲ್ಲಿ ಒಮ್ಮೆ ಬಳಸಿದ ಆಹಾರದ ಪೊಟ್ಟಣಗಳನ್ನು ಯಾವುದೇ ಕಾರಣಕ್ಕೂ ಮರುಬಳಕೆ ಮಾಡಲಾಗುತ್ತಿಲ್ಲ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೈಲ್ವೆ ಸಿಬ್ಬಂದಿ ಬಳಕೆ ಮಾಡಿದ ಆಹಾರದ ಪೊಟ್ಟಣಗಳನ್ನು ತೊಳೆಯುತ್ತಿರುವುದು ನಿಜ. ಆದರೆ, ಅದನ್ನು ಮರುಬಳಕೆ ಮಾಡಲು ಅಲ್ಲ, ಬದಲಾಗಿ ವಿಲೇವಾರಿ ಮಾಡುವ ಮೊದಲು ಸ್ವಚ್ಛಗೊಳಿಸುತ್ತಾರೆ,” ಎಂದು ರೈಲ್ವೆ ಸ್ಪಷ್ಟನೆ ನೀಡಿದೆ.
ಈ ವಿಷಯಕ್ಕೆ ಸಂಬಂಧಿಸಿ ಜನರು ತಪ್ಪು ಮಾಹಿತಿಗಳನ್ನು ಹಂಚಬೇಡಿ ಎಂದು ಮನವಿ ಮಾಡಿರುವ ರೈಲ್ವೆ ಇಲಾಖೆ, ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತಿದೆ ಎಂದು ಪುನರುಚ್ಚರಿಸಿದೆ.



































