
ನವದೆಹಲಿ : ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಬ್ಯಾಂಕುಗಳು ತಮ್ಮ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರನ್ನು ದಾರಿ ತಪ್ಪಿಸುವ ‘ಡಾರ್ಕ್ ಪ್ಯಾಟರ್ನ್’ಗಳನ್ನು (Dark Patterns) ಬಳಸುವುದನ್ನು ತಡೆಯಲು ಆರ್‌ಬಿಐ ಈಗ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಹೊಸ ನಿಯಮಗಳ ಅಡಿಯಲ್ಲಿ, ಗ್ರಾಹಕರ ಅರಿವಿಲ್ಲದೆ ವಿಧಿಸಲಾಗುವ ಗುಪ್ತ ಶುಲ್ಕಗಳು ಮತ್ತು ಒತ್ತಾಯಪೂರ್ವಕವಾಗಿ ನೀಡಲಾಗುವ ಸೇವೆಗಳಿಗೆ ಈಗ ಬ್ರೇಕ್ ಬೀಳಲಿದೆ.
ಆರ್‌ಬಿಐ ಹೊರಡಿಸಿರುವ ‘ಜವಾಬ್ದಾರಿಯುತ ವ್ಯವಹಾರ ನಡವಳಿಕೆ ತಿದ್ದುಪಡಿ ಆದೇಶ 2026’ರ ಪ್ರಕಾರ, ಬ್ಯಾಂಕುಗಳು ಜುಲೈ 1, 2026ರೊಳಗೆ ತಮ್ಮ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿರುವ ಎಲ್ಲಾ ಗೊಂದಲಮಯ ವಿನ್ಯಾಸಗಳನ್ನು ತೆಗೆದುಹಾಕಬೇಕು. ಹಣಕಾಸು ಉತ್ಪನ್ನಗಳನ್ನು ಮಾರಾಟ ಮಾಡುವ ಮೊದಲು ಗ್ರಾಹಕರಿಂದ ಸ್ಪಷ್ಟ ಒಪ್ಪಿಗೆ ಪಡೆಯುವುದು ಈಗ ಕಡ್ಡಾಯವಾಗಿದೆ. ವಿಶೇಷವಾಗಿ ಚೆಕ್‌ಔಟ್ ಸಮಯದಲ್ಲಿ ಹಠಾತ್ ಆಗಿ ಕಾಣಿಸಿಕೊಳ್ಳುವ ಅಚ್ಚರಿಯ ಶುಲ್ಕಗಳು, ಪೂರ್ವ-ಟಿಕ್ ಮಾಡಿದ ಆಯ್ಕೆಗಳು ಮತ್ತು ಗ್ರಾಹಕರನ್ನು ಆತುರದ ನಿರ್ಧಾರ ತೆಗೆದುಕೊಳ್ಳುವಂತೆ ಪ್ರಚೋದಿಸುವ ಸಂದೇಶಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸಮೀಕ್ಷೆಯೊಂದರಲ್ಲಿ ಬಹಿರಂಗವಾದ ಲಕ್ಷಾಂತರ ಗ್ರಾಹಕರ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಆರ್‌ಬಿಐ ತಿಳಿಸಿದೆ.



































