
ನಟಿ ರಶ್ಮಿಕಾ ಮಂದಣ್ಣ ಮತ್ತೆ ತಮ್ಮ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ‘ಮೇಜೋ ಸ್ಟೋರಿ’ ಸಂದರ್ಶನದಲ್ಲಿ “ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ಬಹುಶಃ ನಾನೊಬ್ಬಳೇ” ಎಂದು ರಶ್ಮಿಕಾ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಕಾರಣವಾಗಿದೆ.
ರಶ್ಮಿಕಾ ಅವರ ಈ ಹೇಳಿಕೆಯು ಕೊಡವ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದೆ. ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹಲವು ಮಂದಿ, ಪ್ರೇಮಾ, ಹರ್ಷಿಕಾ ಪೂಣಚ್ಚ, ಕೃಷಿ ತಾಪಂಡ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಶ್ವೇತಾ ಚಂಗಪ್ಪ ಸೇರಿದಂತೆ ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದು ಮಿಂಚಿದ ನಟಿಯರ ಹೆಸರನ್ನು ಉಲ್ಲೇಖಿಸಿ ಟೀಕಿಸಿದ್ದಾರೆ. ಕರ್ನಾಟಕದವರಾಗಿಯೂ ರಶ್ಮಿಕಾ ಅವರಿಗೆ ಈ ಮಾಹಿತಿ ಇಲ್ಲದಿರುವುದು ವಿಪರ್ಯಾಸ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಖಾಸಗಿ ಟಿವಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಕೊಡವ ಸಮುದಾಯದ ನಟಿಯೊಬ್ಬರು, “ಈ ಬಗ್ಗೆ ನಾವೇನು ಮಾತನಾಡುವುದು, ಜನಕ್ಕೆ ಇದರ ಬಗ್ಗೆ ಗೊತ್ತಿದೆ. ಅವರ ಹೇಳಿಕೆಯ ಬಗ್ಗೆ ಜನರೇ ಕಾಮೆಂಟ್ ಮಾಡಿದ್ದಾರೆ. ಕೊಡವ ಸಮಾಜದಿಂದ ಯಾರೆಲ್ಲಾ ಹೀರೋಯಿನ್ಸ್ ಆಗಿದ್ದಾರೆ ಎಂದು ಅವರೇ ತಿಳಿಸಿದ್ದಾರೆ. ನಾನೇನು ಹೇಳೋದು ಇದರಲ್ಲಿ. ಅವರ ಮಟ್ಟಿಗೆ ನಾವು ಮಾತನಾಡುವುದಕ್ಕೆ ಆಗೋದಿಲ್ಲ. ನಾವು ನಾವೇ, ಅವರು ಅವರೇ. ಜನ ಹೇಗೆ ಮಾತಾಡುತ್ತಾರೆ ಅಂತ ಕೂರ್ಗ್ ಜನಕ್ಕೆ ಗೊತ್ತಿದೆ. ನಾನು ಇಂಡಸ್ಟ್ರಿಯಲ್ಲಿ ಮಾತನಾಡುವುದಕ್ಕಿಂತ ಕೆಲಸ ಮಾಡಿಕೊಂಡು ಹೋಗಿದ್ದೇನೆ. ನಾನು ಒಬ್ಬಳು ಕೆಲಸಗಾರ್ತಿ. ಮುಂದೆ ಏನು ಮಾಡಬೇಕು ಅದರ ಬಗ್ಗೆ ಯೋಚಿಸುತ್ತೇವೆ ಅಷ್ಟೇ. ಅವರ ಮಾತಿಗೆಲ್ಲಾ ಕಾಮೆಂಟ್ ಮಾಡುವುದಷ್ಟು ದೊಡ್ಡ ವ್ಯಕ್ತಿಯೇನಲ್ಲ. ಜನರೇ ನನಗೆ ಪ್ರಶಸ್ತಿ ಕೊಟ್ಟಿದ್ದಾರೆ. ಮತ್ತೇನು ಬೇಕು” ಎಂದು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಈ ಹಿಂದೆಯೂ ಇಂತಹ ವಿವಾದಾತ್ಮಕ ಹೇಳಿಕೆಗಳಿಂದಲೇ ಟ್ರೋಲ್‌ಗೆ ಒಳಗಾಗಿದ್ದರು.