
ದಕ್ಷಿಣದ ಜನಪ್ರಿಯ ನಿರ್ದೇಶಕ ಅಟ್ಲಿ ಕುಮಾರ್ ಬಾಲಿವುಡ್‌ನಲ್ಲಿ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಕೈಗೊಳ್ಳಲು ಸಜ್ಜಾಗಿದ್ದಾರೆ. ‘ಜವಾನ್’ ಮೂಲಕ ಶಾರುಖ್ ಖಾನ್ ಜತೆ ಬಿಗ್ ಹಿಟ್ ನೀಡಿದ ಅವರು, ಈ ಬಾರಿ ಸಲ್ಮಾನ್ ಖಾನ್ ಜತೆ ಚಿತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಕೆಲವು ದಿನಗಳಿಂದ ಊಹಾಪೋಹಗಳು ಕೇಳಿಬರುತ್ತಿದ್ದರೆ, ಈಗ ಚಿತ್ರದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರಕಿದೆ.
‘ಕಿರಿಕ್ ಪಾರ್ಟಿ’ ಮೂಲಕ ಎಂಟ್ರಿ ಕೊಟ್ಟು, ”ಪುಷ್ಪ’ದಂತಹ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ, ಪ್ಯಾನ್ ಇಂಡಿಯಾ ಮಟ್ಟದ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಹೀರೋಯಿನ್ ಆಗಲಿದ್ದಾರೆ ಎಂದು ‘ಫಿಲ್ಮ್ ಫೇರ್’ ವರದಿ ಮಾಡಿದೆ. ಶೀಘ್ರದಲ್ಲೇ ರಶ್ಮಿಕಾ ಚಿತ್ರಕ್ಕೆ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಈ ಚಿತ್ರದಲ್ಲಿ ಸಲ್ಮಾನ್ ಜತೆ ರಜನಿಕಾಂತ್ ಅಥವಾ ಕಮಲ್ ಹಾಸನ್ ಕೂಡ ಕಾಣಿಸಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೃಷ್ಟವಶಾತ್, ರಶ್ಮಿಕಾ ಈಗಾಗಲೇ ‘ಸಿಕಂದರ್’ ಚಿತ್ರದಲ್ಲಿ ಸಲ್ಮಾನ್ ಜತೆ ಜೋಡಿಯಾಗಿದ್ದಾರೆ. ಈಗ ಮತ್ತೊಂದು ಚಿತ್ರಕ್ಕೂ ಅವರ ಜೋಡಿಯಾಗಿದೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ!