
ಬೆಂಗಳೂರು : ಕಾಂತಾರ ಚಾಪ್ಟರ್-1 ಚಿತ್ರದ ದೈವದ ಪಾತ್ರವನ್ನು ಅನುಕರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ (ಫೆಬ್ರವರಿ 24) ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಿದೆ.
ಗೋವಾದಲ್ಲಿ ಇತ್ತೀಚೆಗೆ ನಡೆದ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದ ರಿಷಬ್ ಶೆಟ್ಟಿ ಅವರ ದೈವದ ಆವೇಶದ ಪಾತ್ರವನ್ನು ಅಣಕಿಸಿದ್ದರು. ಈ ವೇಳೆ ಅವರು ನೀಡಿದ ಧ್ವನಿ ಹಾಗೂ ಹಾವಭಾವಗಳು ಕರಾವಳಿಯ ಆರಾಧ್ಯ ದೈವಕ್ಕೆ ಮಾಡಿದ ಅಪಮಾನ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಬೆಂಗಳೂರಿನ ವಕೀಲರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ನಟನನ್ನು ಸದ್ಯಕ್ಕೆ ಬಂಧಿಸದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ, ಇದೇ ವೇಳೆ ನ್ಯಾಯಾಲಯವು ನಟನ ಬೇಜವಾಬ್ದಾರಿಯುತ ನಡವಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. “ಕಲಾವಿದರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎನ್ನುವುದು ನಿಜ, ಆದರೆ ಅದು ಕೋಟ್ಯಂತರ ಜನರ ನಂಬಿಕೆ ಮತ್ತು ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವ ಪರವಾನಗಿ ಅಲ್ಲ” ಎಂದು ನ್ಯಾಯಾಧೀಶರು ಕಟು ಮಾತುಗಳಲ್ಲಿ ಎಚ್ಚರಿಸಿದ್ದಾರೆ. ಸದ್ಯಕ್ಕೆ ಬಂಧನದಿಂದ ಬಿಡುಗಡೆ ಸಿಕ್ಕಿದ್ದರೂ, ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಮತ್ತು ಅಗತ್ಯಬಿದ್ದಾಗ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ನಟನಿಗೆ ಆದೇಶಿಸಲಾಗಿದೆ.



































