
ಬೆಂಗಳೂರು: ಕರಾವಳಿಯ ಆರಾಧ್ಯ ದೈವಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಗೊಂಡಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಅಧಿಕಾರಿಗಳು ಈಗಾಗಲೇ ನಟನಿಗೆ 2 ಬಾರಿ ಅಧಿಕೃತ ನೋಟಿಸ್ ಜಾರಿಗೊಳಿಸಿದ್ದರೂ, ರಣವೀರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಈಗ ಪೊಲೀಸ್ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ.
ಏನಿದು ಘಟನೆ? ಗೋವಾದಲ್ಲಿ ನಡೆದ ಫಿಲ್ಮ್‌ಫೇರ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಣವೀರ್ ಸಿಂಗ್, ವೇದಿಕೆಯ ಮೇಲೆ ದೈವಗಳ ಬಗ್ಗೆ ಮಾತನಾಡುವಾಗ ಅಸಭ್ಯ ಪದಬಳಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಕೀಲ ಪ್ರಶಾಂತ್ ಎಂಬುವವರು ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು. ದೈವಗಳ ಪವಿತ್ರತೆಯನ್ನು ಹೀಯಾಳಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬುದು ದೂರಿನ ಸಾರಾಂಶವಾಗಿದೆ.
ಪೊಲೀಸರ ಮುಂದಿನ ನಡೆ: ಪ್ರಕರಣದ ತನಿಖೆಗಾಗಿ ಪೊಲೀಸರು ನಟನಿಗೆ ನೋಟಿಸ್ ನೀಡಿದ್ದಲ್ಲದೆ, ಅವರ ವೈಯಕ್ತಿಕ ವಾಟ್ಸಪ್ (WhatsApp) ಮೂಲಕವೂ ಮಾಹಿತಿ ರವಾನಿಸಿದ್ದಾರೆ. ಆದರೆ, ನಟ ರಣವೀರ್ ಸಿಂಗ್ ಈವರೆಗೂ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿ ಅಥವಾ ನೋಟಿಸ್‌ಗೆ ವಿವರಣೆ ನೀಡಲಿ ಮುಂದಾಗಿಲ್ಲ. ನಟನ ಈ ಅಸಹಕಾರ ಮನೋಭಾವದಿಂದ ಬೇಸತ್ತಿರುವ ಪೊಲೀಸರು, ಈಗ ಮತ್ತೊಮ್ಮೆ ಅಂತಿಮ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಈ ಬಾರಿಯೂ ಸ್ಪಂದಿಸದಿದ್ದರೆ, ಪೊಲೀಸರು ನೇರವಾಗಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸುವ ಸಾಧ್ಯತೆ ಇದೆ.



































