
ಕಾರ್ಕಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶಿವ ಧ್ಯಾನ ಮಂದಿರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಜರಗಿತು. ಸಮಾರಂಭದ ಅಧ್ಯಕ್ಷರಾಗಿ ಕಾಬೆಟ್ಟು ಸರಕಾರಿ ಪ್ರೌಢಶಾಲಾ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಇಂದಿರಾ ಭಟ್ ಮಾತನಾಡುತ್ತ ಪುರಾಣಕತೆಗಳಲ್ಲಿ, ಇತಿಹಾಸದ ಪುಟಗಳಲ್ಲಿ ನಡೆದ ರಾಖಿಯ ದೃಷ್ಟಾಂತಗಳನ್ನು ಉದಾಹರಿಸುತ್ತ ರಾಖಿ ಹಬ್ಬದ ಆಚರಣೆಯ ಮಹತ್ವವನ್ನು ವಿವರಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಇಕ್ಬಾಲ್ ಅಹಮದ್ ರವರು ವಿಶ್ವದಲ್ಲಿ ಶಾಂತಿಯನ್ನು ಸ್ಥಾಪನೆ ಮಾಡುವ ಕಾರ್ಯವನ್ನು ಈಶ್ವರೀಯ ವಿಶ್ವ ವಿದ್ಯಾಲಯವು ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು. ನಿವೃತ ದೈಹಿಕ ಶಿಕ್ಷಕ ಪ್ರಭಾಕರ್ ಜೈನ್ ರವರು ಸಂಸ್ಕಾರವಿಲ್ಲದ ಬದುಕು ಅರ್ಥಹೀನ, ಎಲ್ಲರಲ್ಲೂ ಧಾರ್ಮಿಕ ಚಿಂತನೆ ಕೊರತೆಯಾಗಿದ್ದು ಈಶ್ವರೀಯ ವಿಶ್ವ ವಿದ್ಯಾಲಯದ ಶಿಕ್ಷಣದಿಂದ ಮಾನವೀಯತೆ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ವಾರಕ್ಕೆ ಒಂದು ಬಾರಿಯಾದರೂ ಧ್ಯಾನ ಮಂದಿರಕ್ಕೆ ಬಂದು ನಿಮಿತ್ತ ಸಹೋದರಿಯವರ ಮಾತು ಕೇಳಬೇಕು, ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಢಿಸಬೇಕು ಎಂದು ಅಭಿಪ್ರಾಯ ತಿಳಿಸಿದರು.

ವಿಕಲ ಚೇತನರ ಸಂಪನ್ಮೂಲ ಕೇಂದ್ರ ಕಾರ್ಕಳ – ಹೆಬ್ರಿ ತಾಲೂಕು ಸಂಯೋಜಕಿ ಶ್ರೀಮತಿ ಮಂಜುಳಾ ಸುಭಾಸ್ ರವರು ಒತ್ತಡದ ಜೀವನದಿಂದ ಮುಕ್ತರಾಗಲು ಧ್ಯಾನ ಅವಶ್ಯವೆಂದರು. ಕಾರ್ಕಳ ಸೇವಾ ಕೇಂದ್ರದ ನಿಮಿತ್ತ ಸಂಚಾಲಕಿ ಬಿಕೆ ವಿಜಯಲಕ್ಷ್ಮಿ ಅಕ್ಕನವರು ಶ್ರಾವಣ ಮಾಸದ ಈ ರಕ್ಷಾ ಬಂಧನದಂದು ಸುಜ್ಞಾನದ ಶ್ರವಣ ಮಾಡುತ್ತಾ ಮೌಲ್ಯಗಳೆಂಬ ರಕ್ಷಣೆಯ ಸೂತ್ರದಲ್ಲಿ, ಪರಮಾತ್ಮನ ಪ್ರೇಮದ ಸೂತ್ರದಲ್ಲಿ ಆತ್ಮವನ್ನು ಬಂಧಿಸಿ ಜೀವನವನ್ನು ಸುರಕ್ಷಿತ ಮಾಡಿಕೊಳ್ಳುವಂತೆ ಕರೆ ನೀಡಿದರು.
ಬಿ. ಕೆ. ವರದರಾಯ ಪ್ರಭು ಸ್ವಾಗತಿದರು. ಬಿ. ಕೆ. ಅನ್ನಪೂರ್ಣ ಸಂಸ್ಥೆಯ ಪರಿಚಯ ನೀಡಿದರು ಬಿ. ಕೆ, ಗಾಯತ್ರಿ ಭಟ್, ಬಿ. ಕೆ ಸ್ಮಿತಾ, ಬಿ. ಕೆ. ಮಾಲಿನಿ, ಬಿ. ಕೆ ಶಾಂತ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.