
ನವದೆಹಲಿ: ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಒಂದು ಹೃದಯಸ್ಪರ್ಶಿ ಕಥೆಯೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಸತತ 31 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟುತ್ತಿದ್ದಾರೆ. ಅವರೇ ಖಮರ್ ಮೊಹ್ಸಿನ್ ಶೇಖ್, ಮತ್ತು ಈ ವರ್ಷವೂ ಅವರು ಪ್ರಧಾನಿ ಮೋದಿಗಾಗಿ ರಾಖಿಯನ್ನು ಸಿದ್ಧಪಡಿಸಿ, ದೆಹಲಿಗೆ ಆಗಮಿಸಿದ್ದಾರೆ.
ಯಾರು ಈ ಖಮರ್ ಶೇಖ್?
ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಖಮರ್ ಶೇಖ್ ಅವರು 1981ರಲ್ಲಿ ಮೊಹ್ಸಿನ್ ಶೇಖ್ ಅವರನ್ನು ವಿವಾಹವಾದ ನಂತರ ಭಾರತದ ಅಹಮದಾಬಾದ್‌ನಲ್ಲಿ ನೆಲೆಸಿದರು. 1990ರಲ್ಲಿ ಅಂದಿನ ಗುಜರಾತ್ ರಾಜ್ಯಪಾಲರಾಗಿದ್ದ ದಿವಂಗತ ಡಾ. ಸ್ವರೂಪ್ ಸಿಂಗ್ ಅವರ ಮೂಲಕ ನರೇಂದ್ರ ಮೋದಿಯವರನ್ನು ಮೊಟ್ಟಮೊದಲ ಬಾರಿಗೆ ಭೇಟಿಯಾಗಿದ್ದಾಗಿ ಖಮರ್ ನೆನಪಿಸಿಕೊಂಡಿದ್ದಾರೆ.

ಅಂದು ಸ್ವರೂಪ್ ಸಿಂಗ್ ಅವರು ಖಮರ್ ಅವರನ್ನು ತಮ್ಮ ಮಗಳಂತೆ ಮೋದಿಗೆ ಪರಿಚಯಿಸಿದಾಗ, “ಹಾಗಾದರೆ ಇವಳು ನನ್ನ ಸೋದರಿ” ಎಂದು ಮೋದಿ ಹೇಳಿದ್ದರು. ಅಂದಿನಿಂದ, ಪ್ರತಿ ರಕ್ಷಾ ಬಂಧನಕ್ಕೂ ಖಮರ್ ಅವರು ಮೋದಿಯವರಿಗೆ ರಾಖಿ ಕಟ್ಟುವ ಸಂಪ್ರದಾಯ ಆರಂಭವಾಯಿತು.
ಪ್ರತಿ ರಾಖಿಯಲ್ಲೂ ವಿಶೇಷ ಸ್ಪರ್ಶ
ಖಮರ್ ಅವರು ಪ್ರತಿ ವರ್ಷವೂ ಮಾರುಕಟ್ಟೆಯಿಂದ ರಾಖಿ ಖರೀದಿಸುವುದಿಲ್ಲ. ಬದಲಾಗಿ, ತಾವೇ ಕೈಯಿಂದ ತಯಾರಿಸಿದ ಎರಡು ಸುಂದರ ರಾಖಿಗಳನ್ನು ಪ್ರಧಾನಿ ಮೋದಿಗಾಗಿ ಸಿದ್ಧಪಡಿಸಿದ್ದಾರೆ. ಹಿಂದೆ ತಾವು ಮೋದಿ ಗುಜರಾತ್ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥಿಸಿದಾಗ, ಅದು ಈಡೇರಿತ್ತು. ಆಗ ಮೋದಿ, “ಇನ್ನೇನು ಹಾರೈಸುತ್ತೀಯಾ?” ಎಂದು ಕೇಳಿದಾಗ, “ನೀವು ಭಾರತದ ಪ್ರಧಾನಿಯಾಗುತ್ತೀರಿ” ಎಂದು ಹೇಳಿದ್ದಾಗಿ ಅವರು ನೆನಪಿಸಿಕೊಂಡರು. ಅವರ ಆಸೆ ಈಡೇರಿ, ಮೋದಿ ಇದೀಗ ಮೂರನೇ ಅವಧಿಗೆ ಪ್ರಧಾನಿಯಾಗಿದ್ದಾರೆ.
ಕಳೆದ ವರ್ಷ (2024) ದೆಹಲಿಗೆ ಬರಲು ಸಾಧ್ಯವಾಗದ ಕಾರಣ ಈ ವರ್ಷ ಪ್ರಧಾನಿ ಕಚೇರಿಯಿಂದ ಆಹ್ವಾನಕ್ಕಾಗಿ ಕಾಯುತ್ತಿದ್ದು, ತಮ್ಮ ಸೋದರನನ್ನು ಭೇಟಿಯಾಗಲು ಕಾತುರದಿಂದ ಕಾಯುತ್ತಿದ್ದಾರೆ.