
ಬೆಳಗಾವಿ: ಲೋಕಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಷ್ಟ ಮತ್ತು ತ್ಯಾಗ ದೇಶದ ಯುವಕರಿಗೆ ಮಾದರಿಯಾಗಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಜ್ಞಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮಗ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮೊಮ್ಮಗ ಆದರೂ, ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತಾರೆ ಎಂದು ಗುಣಗಾನ ಮಾಡಿದರು.
ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ಹೆಬ್ಬಾಳ್ಕರ್ ಕಿಡಿ
“ತೋರಿಕೆಗೆ ಮಾತ್ರ ದೇಶಭಕ್ತಿಯ ಹೆಸರಿನಲ್ಲಿ ಬಿಜೆಪಿ ಯುವಕರನ್ನು ವಂಚಿಸುವ ಕೆಲಸ ಮಾಡುತ್ತಿದೆ. ನಮ್ಮ ನಾಯಕ ರಾಹುಲ್ ಗಾಂಧಿಯವರ ಆದರ್ಶಗಳು ಎಲ್ಲಾ ಯುವಕರಿಗೆ ಮಾರ್ಗದರ್ಶಿಯಾಗಬೇಕು” ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದ ಅವರು, “ವಾಟ್ಸಾಪ್ ಯೂನಿವರ್ಸಿಟಿ ಮತ್ತು ಫೇಸ್‌ಬುಕ್ ಯೂನಿವರ್ಸಿಟಿಯಿಂದ ತಪ್ಪು ಸಂದೇಶಗಳು ರವಾನೆಯಾಗುತ್ತಿವೆ. ಗಾಂಧಿ ಕುಟುಂಬದ ಬಗ್ಗೆ ತಪ್ಪು ಭಾವನೆ ಮೂಡಿಸಲಾಗಿದೆ” ಎಂದು ಕಿಡಿಕಾರಿದರು.
“ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡಿದ್ದಾರೆ” ಎಂದು ಶ್ಲಾಘಿಸಿದ ಹೆಬ್ಬಾಳ್ಕರ್, “ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು 9 ವರ್ಷ ಜೈಲಿನಲ್ಲಿದ್ದರು. ದೇಶದ ಮೊದಲ ಬಜೆಟ್ ಮಂಡಿಸಿದ್ದು ನೆಹರೂ. ದೇಶದ ಅಭಿವೃದ್ಧಿಗೋಸ್ಕರ ನೆಹರೂ ಅವರು ತಮ್ಮ ಬಂಗಲೆಯನ್ನು ಬಿಟ್ಟುಕೊಟ್ಟಿದ್ದಾರೆ” ಎಂದು ಹಾಡಿ ಹೊಗಳಿದರು.
ಯುವಕರಿಗೆ ರಾಜಕೀಯ ಪಾಠ
“ಚುನಾವಣೆ ಮಾತ್ರ ನಮ್ಮ ರಾಜಕೀಯ ಗುರಿಯಾಗಿರಬಾರದು. ಒಂದು ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ರಾಜಕೀಯಕ್ಕೆ ಬರಬೇಕು. ನಿಮ್ಮ ಊರಿನಲ್ಲಿ ನಿಮ್ಮ ಹಿಡಿತವಿದ್ದರೆ ನಾಯಕರು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ” ಎಂದು ಯುವಕರಿಗೆ ಹೆಬ್ಬಾಳ್ಕರ್ ಸಲಹೆ ನೀಡಿದರು. “50 ವರ್ಷದಿಂದಲೂ ಆರ್‌ಎಸ್‌ಎಸ್ ಕಚೇರಿ ಮುಂದೆ ಭಾರತದ ಧ್ವಜ ಇರಲಿಲ್ಲ” ಎಂದು ಸಹ ಅವರು ಉಲ್ಲೇಖಿಸಿದರು.