
ಸುಳ್ಯದ ಸಂಪಾಜೆಯಲ್ಲಿ ನಾಯಿ ಕಡಿತಕ್ಕೆ ಒಳಗಾದ 42 ವರ್ಷದ ಮಹಿಳೆ ಚಿಕಿತ್ಸೆ ಪಡೆಯದೆ ಇದ್ದ ಕಾರಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಫೆಬ್ರವರಿ 7ರಂದು ಅರಂತೋಡಿನಲ್ಲಿ ತೋಟದ ಕೆಲಸ ಮಾಡುತ್ತಿದ್ದಾಗ ನಾಯಿಮರಿಯೊಂದು ಅವರ ಮೇಲೆ ದಾಳಿ ಮಾಡಿತ್ತು. ಆದರೆ ಈ ಬಗ್ಗೆ ಅವರು ಯಾರಿಗೂ ಹೇಳದೆ, ಯಾವುದೇ ಚಿಕಿತ್ಸೆ ಕೂಡ ಪಡೆಯಲಿಲ್ಲ.
ರೇಬಿಸ್ ದೃಢ: ಚಿಕಿತ್ಸೆಗೆ ವಿಳಂಬ ದುರಂತಕ್ಕೆ ಕಾರಣ!
ಸೋಮವಾರ ಹೊಟ್ಟೆನೋವು ಕಾಣಿಸಿಕೊಂಡಿದ್ದ ಕಾರಣ ಅವರು ಸುಳ್ಯದ ಸರಕಾರಿ ಆಸ್ಪತ್ರೆಗೆ ತೆರಳಿದಾಗ ನೀರನ್ನು ನೋಡುತ್ತಲೇ ಬೊಬ್ಬೆ ಹಾಕುವಂತಹ ವಿಚಿತ್ರ ಲಕ್ಷಣಗಳು ಗೋಚರಿಸಿದವು. ಹೆಚ್ಚಿನ ವಿಚಾರಣೆ ನಡೆಸಿದಾಗ ನಾಯಿ ಕಡಿತದ ಬಗ್ಗೆ ಮಾಹಿತಿ ಬಹಿರಂಗವಾಯಿತು. ತಕ್ಷಣ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 20ರಂದು ಮೃತಪಟ್ಟರು.
ಇತರರಿಗೂ ಅಪಾಯ?
ಮಹಿಳೆಗೆ ಕಚ್ಚಿದ ನಾಯಿಮರಿ ಇನ್ನೂ ಹಲವರನ್ನು ಕಚ್ಚಿರುವ ಶಂಕೆ ವ್ಯಕ್ತವಾಗಿದೆ. ಆದರೆ ಪ್ರಸ್ತುತ ನಾಯಿ ಎಲ್ಲಿ ಹೋದೆಯೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಹಿನ್ನೆಲೆಯಲ್ಲಿ ಪರಿಸರದ ಹಲವರಿಗೆ ಹಾಗೂ ಕುಟುಂಬದವರಿಗೆ ಎಆರ್‌ವಿ ಲಸಿಕೆ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ತಿಳಿಸಿದ್ದಾರೆ.