
ಶನಿವಾರ ಮುಂಜಾನೆ, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಲಡ್ಕ ಬಿಪಾಸ್ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ (85), ಅವರ ಮಗ ಚಿದಾನಂದ ನಾಯ್ಕ (58), ಮತ್ತು ನೆರೆಮನೆ ನಿವಾಸಿ ರಮೇಶ್ ನಾಯ್ಕ (68) ಎಂದು ಗುರುತಿಸಲಾಗಿದೆ.
ಮೃತರು ಆಲ್ಲೋ ಕಾರಿನಲ್ಲಿ ಪುತ್ತೂರಿನ ಪುಣಚಕ್ಕೆ ಗೋಂದೊಳ್ ಪೂಜೆಗೆ ತೆರಳಿದ್ದರು. ಹಿಂತಿರುಗುವ ವೇಳೆ, ಮುಂಜಾವ 4:15ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೈವೇ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದೆ. ಇದರಿಂದಾಗಿ ಮೂರು ಜೀವಗಳು ಸ್ಥಳದಲ್ಲಿಯೇ ಪ್ರಾಣ ತ್ಯಜಿಸಿದ ದುಃಖಕರ ಘಟನೆ ನಡೆದಿದೆ.
ಘಟನೆ ಬೆಳಕಿಗೆ ಬಂದಿದ್ದು ಬೆಳಗಿನ ಹೊತ್ತಿನಲ್ಲಿ ಮಾತ್ರ. ಸ್ಥಳೀಯರು ಇದನ್ನು ಗಮನಿಸಿ ಮಾಹಿತಿ ನೀಡಿದ ನಂತರ, ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಸಬ್ ಇನ್ಸ್‌ಪೆಕ್ಟರ್ ಉದಯ ರವಿ ಹಾಗೂ ಎಫ್.ಎಸ್.ಐ.ಎಲ್. ತಂಡದ ಅಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸಿದರು.
ಪುತ್ತೂರು ಸಂಚಾರಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.