
ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಗುಮ್ಮಟ್ಟೆಗದ್ದೆ ಎಂಬಲ್ಲಿ ಜನವರಿ 19ರ ಸೋಮವಾರದಂದು ಈ ಆಕಸ್ಮಿಕ ಅವಘಡ ಸಂಭವಿಸಿದೆ. ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ಪೈಂಟಿಮುಗೇರು (62) ಅವರು ಮೃತಪಟ್ಟ ದುರ್ದೈವಿ. ಬಡಗನ್ನೂರು ಸರ್ಕಾರಿ ಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು, ತಮ್ಮ ನಿವಾಸದ ಅಂಗಳದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ.
ಘಟನೆಯ ವಿವರ: ಮನೆಯ ಅಂಗಳದಲ್ಲಿದ್ದ ತೆಂಗಿನ ಮರಕ್ಕೆ ಹಬ್ಬಿಸಲಾಗಿದ್ದ ಕಾಳುಮೆಣಸನ್ನು ಕೀಳಲು ನಾರಾಯಣ ನಾಯಕ್ ಅವರು ಅಲ್ಯೂಮಿನಿಯಂ ಏಣಿಯನ್ನು ಏರಿದ್ದರು. ಈ ಸಂದರ್ಭದಲ್ಲಿ ಏಣಿ ಆಯತಪ್ಪಿ ಜಾರಿದ ಪರಿಣಾಮ, ಅವರು ಮರದ ಮೇಲಿಂದ ಏಣಿಯ ಸಮೇತ ಕೆಳಕ್ಕೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಯಶೋದಾ ಹಾಗೂ ಇಬ್ಬರು ಪುತ್ರರಾದ ತಿಲಕ್ ರಾಜ್ ಮತ್ತು ಯತಿನ್ ರಾಜ್ ಅವರನ್ನು ಅಗಲಿದ್ದಾರೆ. ಇವರು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಪಡುಮಲೆ ಶ್ರೀ ಕೋವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.



































