
ಪುತ್ತೂರು (ಅ.11): ಪಡೂರು ಗ್ರಾಮದ ಸೇಡಿಯಾವು ಕೂಟೇಲು ಸಮೀಪ ಭೀಕರ ಹೆಜ್ಜೇನು ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಗಂಭೀರ ಸ್ಥಿತಿಯಲ್ಲಿದ್ದು, ಹೆಜ್ಜೇನು ದಾಳಿ ಸಂದರ್ಭ ರಕ್ಷಣೆಗೆ ಧಾವಿಸಿದ್ದ ವ್ಯಕ್ತಿ ಚೇತರಿಸಿಕೊಂಡಿದ್ದಾರೆ.
ಅಕ್ಟೋಬರ್ 10 ರಂದು ಸಂಜೆ ಕೂಟೇಲು ಎಂಬಲ್ಲಿ ಈ ದುರ್ಘಟನೆ ನಡೆದಿತ್ತು. ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಮತ್ತು ಗಾಯಗೊಂಡ ಸ್ಥಳೀಯರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದುರ್ಮರಣಕ್ಕೀಡಾದ ಬಾಲಕಿ
ಮೃತಪಟ್ಟ ವಿದ್ಯಾರ್ಥಿನಿಯನ್ನು ಕೂಟೇಲು ನಿವಾಸಿ ಕಿರಣ್ ಎಂಬವರ ಪುತ್ರಿ, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಇಶಾ (7) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 10ರಂದು ಸಂಜೆ ಇಶಾ ಮತ್ತು ಇನ್ನೊಬ್ಬ ವಿದ್ಯಾರ್ಥಿ ಪ್ರತ್ಯಶ್ ಮನೆಗೆ ತೆರಳುತ್ತಿದ್ದಾಗ ಕೂಟೇಲು ಸಮೀಪ ಹೆಜ್ಜೇನುಗಳು ಏಕಾಏಕಿ ಮಕ್ಕಳ ಮೇಲೆ ದಾಳಿ ಮಾಡಿವೆ. ವಿದ್ಯಾರ್ಥಿಗಳು ಕಿರುಚಾಡುವುದನ್ನು ಕೇಳಿ ಸ್ಥಳೀಯರಾದ ನಾರಾಯಣ್ ಎಂಬವರು ರಕ್ಷಣೆಗೆ ಧಾವಿಸಿದ್ದರು. ಈ ವೇಳೆ ಹೆಜ್ಜೇನು ಅವರಿಗೂ ಕಚ್ಚಿದೆ.
ಗಾಯಗೊಂಡಿದ್ದ ಇಶಾ ಮತ್ತು ಪ್ರತ್ಯಶ್ ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಅಸ್ವಸ್ಥಗೊಂಡ ಇಶಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಅವರು ಚಿಕಿತ್ಸೆಗೆ ಸ್ಪಂದಿಸದೆ ಅಕ್ಟೋಬರ್ 11ರಂದು ಮೃತಪಟ್ಟಿದ್ದಾರೆ. ಪ್ರತ್ಯಶ್ ಅವರ ಆರೋಗ್ಯದಲ್ಲೂ ಏರುಪೇರಾಗಿದ್ದು, ಅವರನ್ನು ಸಹ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ರಕ್ಷಣೆಗೆ ಬಂದಿದ್ದ ಸ್ಥಳೀಯ ನಾರಾಯಣ್ ಅವರು ಮಹಾವೀರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.



































