
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಎರಡು ದಿನಗಳೊಳಗೆ ಬಂಧಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಖಡಕ್ ಸೂಚನೆ ನೀಡಿದ್ದರು.
ಜಿಲ್ಲಾ ಎಸ್‌ಪಿ ಅವರಿಗೆ ದೂರವಾಣಿ ಕರೆ ಮಾಡಿದ ಶಾಸಕ ಅಶೋಕ್ ರೈ, “ಆರೋಪಿ ಎಲ್ಲೇ ಅಡಗಿದ್ದರೂ ಆತನನ್ನು ತಕ್ಷಣ ಬಂಧಿಸಬೇಕು. ಆರೋಪಿಯ ಬಂಧನದಲ್ಲಿ ವಿಳಂಬವಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆದ್ದರಿಂದ, ವಿಶೇಷ ತಂಡವನ್ನು ರಚಿಸಿ, ಎರಡು ದಿನದೊಳಗೆ ಆತನನ್ನು ಬಂಧಿಸಬೇಕು. ನೊಂದ ಯುವತಿಗೆ ನ್ಯಾಯ ಒದಗಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು. ಇಲಾಖೆಗೆ ನನ್ನಿಂದ ಯಾವುದೇ ನೆರವು ಬೇಕಿದ್ದರೂ ಒದಗಿಸಲು ಸಿದ್ಧನಿದ್ದೇನೆ” ಎಂದು ತಿಳಿಸಿದ್ದರು.ಇದರ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಜೆ ರಾವ್ (21) ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.
ಜುಲೈ 4 ರಂದು ರಾತ್ರಿ ಮೈಸೂರಿನ ಟಿ. ನರಸಿಪುರದಲ್ಲಿ ಪೊಲೀಸರು ಕೃಷ್ಣ ಜೆ ರಾವ್‌ನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದಾರೆ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.