
ಪುತ್ತೂರು: ಒಬ್ಬ ಪ್ರಸಿದ್ಧ ಗಾಯಕಿಯ ವೈವಾಹಿಕ ಜೀವನ ಮತ್ತು ವಿಚ್ಛೇದನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸುದ್ದಿ, ವೀಡಿಯೊ, ಆಡಿಯೋ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ನ್ಯಾಯಾಲಯವು ತಡೆಯಾಜ್ಞೆ ಜಾರಿ ಮಾಡಿದೆ.
ಗಾಯಕಿಯ ವೈಯಕ್ತಿಕ ಜೀವನದ ವಿಷಯಗಳನ್ನು ಮಾಧ್ಯಮಗಳು ಪ್ರಕಟಿಸುವುದನ್ನು ತಡೆಯಲು ಅವರ ವಕೀಲ್ ಮಹೇಶ್ ಕಜೆ ಮೂಲಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕೃತಿ ಕಲ್ಯಾಣ್ಪುರ್ ಗಂಭೀರವಾಗಿ ಪರಿಗಣಿಸಿ, ಎಲ್ಲಾ ಡಿಜಿಟಲ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನೆ ನೀಡಿದ್ದಾರೆ.
ನ್ಯಾಯಾಲಯವು ತೀರ್ಪಿನಲ್ಲಿ, “ಈ ಪ್ರಕರಣದ ವಿವರಗಳನ್ನು ನ್ಯಾಯಾಲಯದ ಅನುಮತಿಯಿಲ್ಲದೆ ಪ್ರಕಟಿಸಿದ್ದು, ಅರ್ಜಿದಾರರ ಗೌಪ್ಯತೆ ಮತ್ತು ಭಾವನೆಗಳನ್ನು ಉಲ್ಲಂಘಿಸಿದೆ” ಎಂದು ತಿಳಿಸಿದೆ. ಮಾಧ್ಯಮಗಳು ಈಗಾಗಲೇ ಹಂಚಿಕೆ ಮಾಡಿದ ವರದಿಗಳು, ವೀಡಿಯೊಗಳು, ಕಾಮೆಂಟ್ಗಳು ಅಥವಾ ಲೇಖನಗಳನ್ನು ತಕ್ಷಣ ತೆಗೆದುಹಾಕುವಂತೆ ಮತ್ತು ಭವಿಷ್ಯದಲ್ಲಿ ಯಾವುದೇ ಸಂಬಂಧಿತ ವಿಷಯವನ್ನು ಪ್ರಸಾರ ಮಾಡದಂತೆ ಆದೇಶಿಸಲಾಗಿದೆ. ಹೆಚ್ಚುವರಿಯಾಗಿ, ನ್ಯಾಯಾಲಯದ ಇ-ಕೋರ್ಟ್ ವ್ಯವಸ್ಥೆಯಲ್ಲಿ ಗಾಯಕಿಯ ವಿವರಗಳನ್ನು ಗೋಪ್ಯವಾಗಿಡುವಂತೆ ಕಚೇರಿಗೆ ಸೂಚನೆ ನೀಡಲಾಗಿದೆ.
ಈ ತಡೆಯಾಜ್ಞೆಯು ವೈಯಕ್ತಿಕ ಗೌಪ್ಯತೆ ಮತ್ತು ಮಾನಸಿಕ ಸುರಕ್ಷತೆಗೆ ಮಹತ್ವ ನೀಡುವ ನ್ಯಾಯಾಲಯದ ನಿಲುವನ್ನು ಎತ್ತಿ ತೋರಿಸುತ್ತದೆ.