
ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಬಳಿಕ ಯುವತಿ ಗರ್ಭಿಣಿಯಾಗುತ್ತಿದ್ದಂತೆಯೇ ಮದುವೆಗೆ ನಿರಾಕರಿಸಿದ ಯುವಕನ ವಿರುದ್ಧ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ನಂಬಿಕೆ ದ್ರೋಹದ ಗಂಭೀರ ಆರೋಪದೊಂದಿಗೆ ಪ್ರಕರಣ ದಾಖಲಾಗಿದೆ.
ಬಪ್ಪಳಿಗೆ ನಿವಾಸಿಯಾದ ಕೃಷ್ಣ ರಾವ್ (21) ಎಂಬ ಆರೋಪಿ, ಪುತ್ತೂರಿನ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಇಬ್ಬರೂ ಸಹಪಾಠಿಗಳಾಗಿದ್ದು, ಯುವತಿ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಯುವತಿಯ ದೂರಿನ ಪ್ರಕಾರ, 2024ರ ಅಕ್ಟೋಬರ್ 11 ರಂದು ಕೃಷ್ಣ ತನ್ನ ಮನೆಗೆ ಕರೆಸಿ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ ಎನ್ನಲಾಗಿದೆ.
ಈ ಘಟನೆ ಬಳಿಕ ಕೆಲ ತಿಂಗಳೊಳಗೆ ಯುವತಿ ಗರ್ಭಿಣಿಯಾಗಿದ್ದು, ತಾನು ಗರ್ಭಿಣಿಯಾಗಿರುವುದನ್ನು ಕೃಷ್ಣನಿಗೆ ತಿಳಿಸಿದ್ದಳು. ಆದರೆ ಆರೋಪಿ ಈ ವಿಷಯವನ್ನು ಕುಟುಂಬಸ್ಥರಿಗೆ ಹೇಳದಿದ್ದರೆ ಮದುವೆಯಾಗುವೆ ಎಂದು ಭರವಸೆ ನೀಡಿದ್ದ. ಆದರೆ ಯುವತಿ 9 ತಿಂಗಳ ಗರ್ಭಿಣಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿದ್ದಾನೆ.
ಪ್ರಸ್ತುತ ಆರೋಪಿ ಕೃಷ್ಣ ರಾವ್ ತಲೆಮರೆಸಿಕೊಂಡಿದ್ದಾನೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಯುವತಿಯು ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾಳೆ.